ಬಾಗಲಕೋಟೆ: ರಾಜ್ಯದ ಜನರು ನಮ್ಮ ಬಗ್ಗೆ ತಪ್ಪು ತಿಳಿದುಕೊಂಡರೂ ಪರವಾಗಿಲ್ಲ. ಆದರೆ, ಅವರ ಜೀವ ಉಳಿಸುವುದು ಮುಖ್ಯ. ಹೀಗಾಗಿ, ಅಧಿಕಾರಿಗಳ ಮಾತು ಕೇಳದೆ ನದಿಗೆ ಇಳಿಯುವವರಿಗೆ ಲಾಠಿ ರುಚಿ ತೋರಿಸಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬುಧವಾರ ಸೂಚನೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಘಟಪ್ರಭಾ ನದಿಯಿಂದ ಪ್ರವಾಹ ಉಂಟಾಗಿದ್ದು, ವಿವಿಧ ಗ್ರಾಮಗಳಿಗೆ ಕೃಷ್ಣ ಬೈರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಮೀನು ಹಿಡಿಯಲು, ಕೃಷಿ ಚಟುವಟಿಕೆ, ಸೆಲ್ಫಿಗಾಗಿ ಯಾರೂ ನದಿ ಅಥವಾ ಹೊಳೆಗೆ ಇಳಿಯಬಾರದು. ಒಂದು ವೇಳೆ ಒಳ್ಳೆ ಮಾತಿಗೆ ಗೌರವ ಕೊಡದೆ ನದಿಗೆ ಇಳಿದವರಿಗೆ ಲಾಠಿ ಏಟು ನಿಶ್ಚಿತ. ನಮ್ಮ ರಾಜ್ಯದಲ್ಲಿ ಪ್ರಾಣಹಾನಿಯಾಗಲು ನಾವು ಬಿಡುವುದಿಲ್ಲ ಎಂದು ಹೇಳಿದರು.
ನಮ್ಮ ಪುಣ್ಯ ಎರಡು ದಿನಗಳಿಂದ ಮಳೆಯ ಅಬ್ಬರ ಕಡಿಮೆಯಾಗಿದೆ. 2019-20ರಲ್ಲಿ 272 ಮಂದಿ ಮಳೆಯ ಅಬ್ಬರದಿಂದ ಸಾವನ್ನಪ್ಪಿದ್ದರು. 2022 ರಲ್ಲಿ 249 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ವರ್ಷ 243 ಸಾವುಗಳು ಸಂಭವಿಸಿವೆ. ಈ ಬಾರಿ, ಮಳೆಗೆ ಹೆಚ್ಚಿನ ಪ್ರಾಣಹಾನಿಯಾಗದಂತೆ ತಡೆಯಬೇಕು. ಅದಕ್ಕಾಗಿ, ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.