ಕಳ್ಳನನ್ನು ಬೆನ್ನಟ್ಟಿ ಹಿಡಿದ ಸಾಹಸಿ ಕಾನ್ಸ್ಟೇಬಲ್ ಗೆ ಪ್ರಶಂಶನಾ ಪತ್ರ
ತುಮಕೂರು : ಸಿನಿಮಾ ಶೈಲಿಯಲ್ಲಿ 32 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳನನ್ನು ಹಿಡಿದ ಪೊಲೀಸ್ ಕಾನ್ಸ್ಟೇಬಲ್ ದೊಡ್ಡಲಿಂಗಯ್ಯಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅಭಿನಂದಿಸಿ ಪ್ರಶಂಸನಾ ಪತ್ರ ನೀಡಿದ್ದಾರೆ.
ಮಂಜೇಶ್ ಎಂಬಾತ ಬಂಧಿತ ಕಳ್ಳ. ಈತನನ್ನು ಪತ್ತೆ ಹಚ್ಚಿ ಬಂಧಿಸುವಾಗ ಪೊಲೀಸ್ ಕಾನ್ಸ್ಟೇಬಲ್ ದೊಡ್ಡಲಿಂಗಯ್ಯ ತೋರಿದ ಸಾಹಸಕ್ಕೆ ಜನಮೆಚ್ಚುಗೆ ವ್ಯಕ್ತವಾಗಿತ್ತು.
ಹೇಗಿತ್ತು ಗೊತ್ತಾ ಕಳ್ಳನನ್ನು ಬಂಧಿಸಿದ ಪ್ಲಾನ್
ಎಸ್ಪಿ ಕೆ.ವಿ.ಅಶೋಕ್ ಈ ಬಗ್ಗೆ ಮಾತನಾಡಿ, “ವೃದ್ದೆಯರು ಅಥವಾ ಎಟಿಎಂ ಬಳಿ ಯಾರಾದರೂ ಅನಕ್ಷರಸ್ಥರು ಬಂದಾಗ ಅವರಿಂದ ಆರೋಪಿ ಹಣ, ಒಡವೆ ದೋಚುತ್ತಿದ್ದ. ಆತನ ಕ್ರಿಮಿನಲ್ ಇತಿಹಾಸ ಗಮನಿಸಿದಾಗ ತುಮಕೂರು, ಹೆಬ್ಬೂರು, ಕೊರಟಗೆರೆ ಪೊಲೀಸ್ ಠಾಣೆಗಳಲ್ಲಿ ಸುಮಾರು 7 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇದನ್ನು ಹೊರತುಪಡಿಸಿ ಬೆಂಗಳೂರು ನಗರದಲ್ಲೂ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಇತ್ತೀಚೆಗೆ ಕೊರಟಗೆರೆ ನಗರ ಡಿಸಿಸಿ ಬ್ಯಾಂಕ್ ಹತ್ತಿರದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದನು. ಸಿಸಿಟಿವಿಯಲ್ಲಿ ಬೈಕ್ನ ನಂಬರ್ ಪತ್ತೆಯಾಗಿತ್ತು. ಅದನ್ನು ಆಧರಿಸಿ ಪೊಲೀಸರು ಆತನ ಹಿಂಬಾಲಿಸಿದ್ದರು. ಆತ ಬೆಂಗಳೂರಿಗೆ ಹೋಗಿರುವುದು ಮಾಹಿತಿ ಜಾಡು ಹಿಡಿದರು. ಬೆಂಗಳೂರಿನಲ್ಲಿ ನಮ್ಮ ಪೊಲೀಸ್ ಕಮಾಂಡ್ ಕಂಟ್ರೋಲ್ ಆ ನಂಬರ್ ಅನ್ನು ಟ್ರ್ಯಾಕಿಂಗ್ ಮಾಡಿದ್ದಾರೆ. ಆಗ ಅದು ಸದಾಶಿವನಗರ ಹಾಗೂ ರಾಮಯ್ಯ ಪ್ರದೇಶದಲ್ಲಿ ಕಂಡುಬಂದಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್ಸ್ ಟೇಬಲ್ ಗಳಾದ ದೊಡ್ಡಲಿಂಗಯ್ಯ ಹಾಗೂ ಮೋಹನ್ ಎಂಬವರನ್ನು ಕಳೆದ 45 ದಿನಗಳಿಂದ ಫಾಲೋ ಅಪ್ಗೆ ಬಿಟ್ಟಿದ್ದೆವು. ಬೆಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ವರ್ಕ್ ಮಾಡುತ್ತಿದ್ದ ಇಂಜಿನಿಯರ್ ಮಾಹಿತಿ ನೀಡಿದಾಗ ನಮ್ಮವರು ಜಂಕ್ಷನ್ನಲ್ಲಿ ಕಾಯುತ್ತಿದ್ದರು. ಆರೋಪಿಯನ್ನು ಹಿಡಿದುಕೊಳ್ಳಲು ಹೋಗುವಾಗ ಆತ ಪರಾರಿಯಾಗಲು ಪ್ರಯತ್ನಪಟ್ಟಿದ್ದಾನೆ.ಆಗ ಅಲ್ಲೇ ಇದ್ದ ಸದಾಶಿವನಗರ ಟ್ರಾಫಿಕ್ ಠಾಣಾ ಮಹಿಳಾ ಎಎಸ್ಐ ಹಾಗೂ ಹೋಂ ಗಾರ್ಡ್ ಸಹಾಯದಿಂದ ಹಿಡಿದಿದ್ದಾರೆ. ಆರೋಪಿಯನ್ನು ಅರೆಸ್ಟ್ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿ ಕಸ್ಟಡಿಗೆ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಕಾನ್ಸ್ಟೇಬಲ್ಗಳಾದ ದೊಡ್ಡಲಿಂಗಯ್ಯ ಹಾಗು ಮೋಹನ್ ಅವರಿಗೆ ಪ್ರಶಂಸನಾ ಪತ್ರ ನೀಡಿದ ಎಸ್ಪಿ ಅಭಿನಂದನೆ ಸಲ್ಲಿಸಿದರು. ಪೊಲೀಸ್ ಪದಕಕ್ಕೂ ಶಿಫಾರಸು ಮಾಡುವುದಾಗಿ ತಿಳಿಸಿದರು.