ದಾವಣಗೆರೆ : ದಿನದಿಂದ ದಿನಕ್ಕೆ ತುಂಗಭದ್ರಾ ನದಿನೀರಿನ ಮಟ್ಟ ಹೆಚ್ಚುತ್ತಿದೆ. ಉಕ್ಕಿ ಹರಿಯುತ್ತಿರುವ ನದಿ ತೀರಕ್ಕೆ ಹೋಗ್ಬೇಡಿ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಆದ್ರೂ ದನಗಳ ಮೈ ತೊಳೆಯಲು ಹೋಗಿ ಯುವಕ ತುಂಗಭದ್ರಾ ನದಿ ಪಾಲಾಗಿರುವ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಧೂಳೆಹೊಳೆ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಘಟನೆ ನಡೆದಿದೆ. ಇಂಗಳಗೊಂದಿ ಜಯಪ್ಪ (32) ನದಿ ಪಾಲಾದ ಯುವಕ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಧೂಳೆಹೊಳೆ ಗ್ರಾಮದ ನಿವಾಸಿ ಆಗಿರುವ ಮೃತ ಜಯಪ್ಪ ನದಿ ನೀರಿನ ಮಟ್ಟ ಹೆಚ್ಚಾಗಿದ್ದನ್ನು ಗಮನಿಸದೆ ತುಂಗಭದ್ರಾ ನದಿಗಿಳಿದು ಜಾನುವಾರುಗಳ ಮೈ ತೊಳೆಯಲು ಮುಂದಾಗಿದ್ದ. ಜಯಪ್ಪ ನೀರಿಗಿಳಿಯುತ್ತಿದ್ದಂತೆ ಇದ್ದಕ್ಕಿದ್ದಂತೆ ನೀರಿನ ಸೆಳೆತಕ್ಕೆ ಸಿಲುಕಿ ನದಿ ಪಾಲಾಗಿದ್ದಾನೆ.
ಧೂಳೆಹೊಳೆ ಗ್ರಾಮದಿಂದ ಎರಡು ಕಿಲೋ ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ಶನಿವಾರ ಸಂಜೆ ಈ ಘಟನೆ ನಡೆದಿದೆ.