ಕಣ್ಣಿಗೆ ಕಂಡರೂ ಕೈಗೆಟುಕದ ‘ಟುಪಲೇವ್’

ಕಾರವಾರ: ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ‘ಐಎನ್ಎಸ್ ಚಪಲ್’ ಯುದ್ಧನೌಕೆ ವಸ್ತುಸಂಗ್ರಹಾಲಯದ ಪಕ್ಕ 8 ತಿಂಗಳಿನಿಂದ ನೆಲೆ ನಿಂತಿರುವ ‘ಟುಪಲೇವ್ (142-ಎಂ)’ ವಿಶ್ರಾಂತ ಯುದ್ಧ ವಿಮಾನ ಸಾರ್ವಜನಿಕ ವೀಕ್ಷಣೆಗೆ ಇನ್ನೂ ಮುಕ್ತವಾಗಿಲ್ಲ. ಇದಕ್ಕೆ ಪೂರಕವಾದ ಕಾರ್ಯಗಳು ಆಮೆಗತಿಯಲ್ಲಿ ಸಾಗಿದೆ.

2017ರಲ್ಲಿ ಭಾರತೀಯ ಸೇನೆಯ ಕರ್ತವ್ಯದಿಂದ ಮುಕ್ತವಾದ ಯುದ್ಧವಿಮಾನದ ಬಿಡಿಭಾಗಗಳನ್ನು ತಮಿಳುನಾಡಿನ ಅರಕ್ಕೋಣಮ್ನಲ್ಲಿನ ರಾಜೋಲಿ ನೌಕಾನೆಲೆಯಿಂದ 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ಕಾರವಾರಕ್ಕೆ ತರಲಾಯಿತು. ಅಕ್ಟೋಬರ್ನಲ್ಲಿ ಯುದ್ಧವಿಮಾನದ ಭಾಗಗಳನ್ನು ಮರುಜೋಡಿಸಿ, ಉದ್ಯಾನದಲ್ಲಿ ಇರಿಸಲಾಯಿತು. ಸಾಗಣೆ, ಮರು ಜೋಡಣೆ ವೆಚ್ಚ ನೌಕಾದಳ ಭರಿಸಿದೆ. ನಿರ್ವಹಣೆ ಹೊಣೆಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗಿದೆ.

ಡಿಸೆಂಬರ್ ವೇಳೆಗೆ ಯುದ್ಧವಿಮಾನ ವಸ್ತು ಸಂಗ್ರಹಾಲಯ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವ ನಿರೀಕ್ಷೆ ಇತ್ತು. ಆದರೆ, ಅದು ಈಡೇರಲಿಲ್ಲ. 53.6 ಮೀಟರ್ ಉದ್ದ ಮತ್ತು 35 ಮೀಟರ್ ಅಗಲವಿರುವ ಯುದ್ಧ ವಿಮಾನವು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇದೆ. ಸಹಜವಾಗಿ ಕುತೂಹಲ ಮೂಡುತ್ತದೆ. ಆದರೆ, ಅದನ್ನು ವೀಕ್ಷಿಸಲು ಸಮೀಪ ತೆರಳಿದರೆ, ವಿಮಾನವಿರುವ ಉದ್ಯಾನದ ಬಾಗಿಲು ಹಾಕಿರುವುದು ಗೋಚರಿಸುತ್ತದೆ’ ಎಂದು ನಿವಾಸಿ ಶೈಲೇಶ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ಮಂಕಾಳ ವೈದ್ಯ, ಜಿಲ್ಲಾ ಉಸ್ತುವಾರಿ ಸಚಿವಟುಪಲೇವ್ ಯುದ್ಧ ವಿಮಾನದ ವಸ್ತು ಸಂಗ್ರಹಾಲಯವನ್ನು ಆದಷ್ಟು ಶೀಘ್ರ ಆರಂಭಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ.

‘ಕಡಲತೀರದಲ್ಲಿ ಯುದ್ಧನೌಕೆ, ಯುದ್ಧವಿಮಾನ ವಸ್ತು ಸಂಗ್ರಹಾಲಯ ಒಟ್ಟಿಗೆ ಇರುವ ಅಪರೂಪದ ತಾಣವಾದರೂ 8 ತಿಂಗಳಿನಿಂದ ಸಾರ್ವಜನಿಕರ ವೀಕ್ಷಣೆಗೆ ಬಿಡುತ್ತಿಲ್ಲ. ಪ್ರವಾಸೋದ್ಯಮವನ್ನೇ ಆಧರಿಸಿರುವ ಕಾರವಾರ ಅವಕಾಶ ಇದ್ದೂ ನಷ್ಟ ಎದುರಿಸುತ್ತಿದೆ’ ಎಂದು ಅವರು ತಿಳಿಸಿದರು.

‘ಯುದ್ಧವಿಮಾನ ವಸ್ತು ಸಂಗ್ರಹಾಲಯಕ್ಕೆ ಹವಾನಿಯಂತ್ರಕ ಅಳವಡಿಕೆ ಸೇರಿ ಕೆಲ ಸಣ್ಣಪುಟ್ಟ ನಿರ್ವಹಣೆ ಕೆಲಸ ನಡೆಯಬೇಕಿದೆ’ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದರು.

Leave a Reply

Your email address will not be published. Required fields are marked *