ಶೀಘ್ರದಲ್ಲಿಯೇ ಬರಲಿದೆ ವಂದೇ ಭಾರತ್‌ ಸ್ಲೀಪರ್‌ ಟ್ರೈನ್

ಮುಂಬೈ: ವಂದೇ ಭಾರತ್‌ ಎಕ್ಸ್‌ಪ್ರೆಸ್‌  ಪ್ರೀಮಿಯಂ ಸೆಮಿ-ಹೈಸ್ಪೀಡ್ ರೈಲಾಗಿ ಯಶಸ್ವಿಯಾಗಿ ಸಂಚಾರವನ್ನು ನಡೆಸುತ್ತಿದ್ದು, ದೂರದ ಹಲವು ನಗರಗಳಿಗೆ ಸಂಪರ್ಕ ಕೊಂಡಿಯಾಗಿದೆ. ಆದಾಗ್ಯೂ ಈ ರೈಲುಗಳಲ್ಲಿ ರಾತ್ರಿ ಪ್ರಯಾಣ ಅಸಾಧ್ಯವಾಗಿದ್ದು, ರೈಲ್ವೆ ಇಲಾಖೆಯು ವಂದೇ ಭಾರತ್ ಸ್ಲೀಪರ್‌ನ್ನು ಅಭಿವೃದ್ಧಿಪಡಿಸುತ್ತಿದೆ.

   ಈ ರೈಲು ಶೀಘ್ರ ಹಳಿಗೆ ಬರುವ ನಿರೀಕ್ಷೆಯಿದ್ದು, ಭೋಪಾಲ್ ಮತ್ತು ಮುಂಬೈ ನಡುವೆ ಕಾರ್ಯಾಚರಣೆ ಆರಂಭಿಸಲಿದೆ. ಇದೇ ಮೊದಲ ವಂದೇ ಭಾರತ್ ಸ್ಲೀಪರ್ ರೈಲಾಗಿರಲಿದೆ ಎಂದು ತಿಳಿದುಬಂದಿದೆ.

   ವಿವಿಧ ಮಾಧ್ಯಮಗಳ ವರದಿ ಪ್ರಕಾರ, ಭೋಪಾಲ್ ಹಾಗೂ ಮುಂಬೈ ಮಧ್ಯೆ ವಂದೇ ಭಾರತ್ ಸ್ಲೀಪರ್‌ನ ಪ್ರಾಯೋಗಿಕ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ಸದ್ಯ ಇವೆರೆಡು ನಗರಗಳ ನಡುವೆ ಸರಿ ಸುಮಾರು 800 ಕಿಲೋಮೀಟರ್‌ ಅಂತರವಿದ್ದು, ಸಾಮಾನ್ಯ ರೈಲುಗಳಲ್ಲಿ ಸುಮಾರು 15 ಗಂಟೆ ಪ್ರಯಾಣಿಸಲಿದೆ. ಆದಾಗ್ಯೂ ವಂದೇ ಭಾರತ್ ಸ್ಲೀಪರ್ ಕೇವಲ 8-9 ಗಂಟೆಗಳಲ್ಲಿ ಈ ದೂರವನ್ನು ಕ್ರಮಿಸಲಿದೆ ಎನ್ನಲಾಗಿದೆ.

   ಹೊಸ ವಂದೇ ಭಾರತ್ ಸ್ಲೀಪರ್ ರೈಲು ಪ್ರಯಾಣಿಕರಿಗೆ ವಿಮಾನದಂತಹ ಅತ್ಯುತ್ತಮ ವಿಶ್ವದರ್ಜೆಯ ಸೌಲಭ್ಯವನ್ನು ಒದಗಿಸಲಿದ್ದು, ರಾಜಧಾನಿ ಎಕ್ಸ್‌ಪ್ರೆಸ್  ರೈಲುಗಳಿಗೆ ಪರ್ಯಾಯವಾಗಲಿದೆ ಎಂದು ಹೇಳಲಾಗಿದೆ. ಈ ರೈಲನ್ನು ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಸಹಯೋಗದಲ್ಲಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ತಯಾರಿಕಾ ಘಟಕದಲ್ಲಿ ಸಿದ್ಧಪಡಿಸಲಾಗುತ್ತಿದೆ.

   ನೂತನ ವಂದೇ ಭಾರತ್ ಸ್ಲೀಪರ್ ರೈಲು, ಒಟ್ಟು 16 ಕೋಚ್‌ಗಳನ್ನು ಹೊಂದಿರಲಿದೆ. ಅದರಲ್ಲಿ 11 ಎಸಿ 3-ಟೈರ್ ಕೋಚ್‌, 4 ಎಸಿ 2-ಟೈರ್ ಕೋಚ್‌ ಮತ್ತು 1 ಎಸಿ ಮೊದಲ ದರ್ಜೆ ಕೋಚ್ ಇರಲಿದ್ದು, ಎಲ್ಲವು ಸೇರಿ 823 ಬರ್ತ್‌ಗಳನ್ನು ಪಡೆದಿರುವ ಸಾಧ್ಯತೆಯಿದೆ. ಈ ರೈಲು ಗಂಟೆಗೆ 160 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚರಿಸಬಹುದು ಎಂದು ಹೇಳಲಾಗಿದೆ. 

    ಈ ರೈಲಿನಲ್ಲಿ ವಾಸನೆ ಮುಕ್ತ ಶೌಚಾಲಯ, ಹೊರಭಾಗದಲ್ಲಿ ಸ್ವಯಂ ಚಾಲಿತ ಬಾಗಿಲು ಇರಲಿದೆ. ಜೊತೆಗೆ ಮೊದಲ ದರ್ಜೆಯ ಎಸಿ ಕೋಚ್‌ನಲ್ಲಿ ಬಿಸಿನೀರಿನ ಸ್ಥಾನದ ವ್ಯವಸ್ಥೆಯನ್ನು ಹೊಂದಿರಲಿದ್ದು, ಶಬ್ದ ನಿರೋಧಕವು ಆಗಿರಲಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲು ಕವಾಚ್ ವ್ಯವಸ್ಥೆಯನ್ನು ಪಡೆದಿರಲಿದೆ ಎಂದು ತಿಳಿದುಬಂದಿದೆ.

   ರೈಲ್ವೆ ಇಲಾಖೆಯು ಹತ್ತಿರದ ನಗರ ಮತ್ತು ಪಟ್ಟಣಗಳನ್ನು ಬೆಸೆಯಲು ವಂದೇ ಮೆಟ್ರೋ ರೈಲನ್ನು ಸಹ ಅಭಿವೃದ್ಧಿಪಡಿಸುತ್ತದೆ. ಪಂಜಾಬ್‌ನ ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ   ಈ ರೈಲಿನ ಕೋಚ್‌ಗಳನ್ನು ತಯಾರಿಸಲಾಗುತ್ತಿದ್ದು, ಪ್ರಯಾಣಿಕರು 250 ಕಿಲೋಮೀಟರ್ ದೂರವನ್ನು ಆರಾಮದಾಯಕವಾಗಿ ಕ್ರಮಿಸಲು ಸಾಧ್ಯವಾಗುವಂತೆ ಸಿದ್ದಪಡಿಸಲಾಗುತ್ತಿದೆ.

   ಸಂಪೂರ್ಣ ಹವಾನಿಯಂತ್ರಿತವಾಗಿರುವ ವಂದೇ ಮೆಟ್ರೋ, ಗಂಟೆಗೆ 130 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಓಡುವಂತೆ ತಯಾರಿಸಲಾಗುತ್ತಿದೆ. , ಪ್ರತಿ ಕೋಚ್‌ನಲ್ಲಿ 280 ಮಂದಿ ಸಂಚರಿಸಬಹುದು. ಒಟ್ಟು 4,364 ಜನರು ಏಕಕಾಲದಲ್ಲಿ ವಂದೇ ಮೆಟ್ರೋದಲ್ಲಿ ಪ್ರಯಾಣಿಸಲು ಸಾಧ್ಯವಾಗಲಿದೆ ಎನ್ನಲಾಗಿದೆ. ಪ್ರಯಾಣಿಕರಿಗೆ ರಕ್ಷಣೆ ಒದಗಿಸಲು ಈ ರೈಲಿನಲ್ಲಿ ಅಗ್ನಿ ಪತ್ತೆ ವ್ಯವಸ್ಥೆ ಹಾಗೂ ಕವಚ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *