ಜಿಗಣಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 250 ಕೆಜಿ ಗಾಂಜಾ ಜಪ್ತಿ, ಇಬ್ಬರ ಬಂಧನ.!

ಜಿಗಣಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 250 ಕೆಜಿ ಗಾಂಜಾ ಜಪ್ತಿ, ಇಬ್ಬರ ಬಂಧನ.!

ಪೌಲ್ಟ್ರಿ ಫೀಡ್ಸ್ ವಾಹನದಲ್ಲಿ ಗಾಂಜಾ ಸಾಗಣೆ: ಆನೇಕಲ್‌ನಲ್ಲಿ ಕೋಟಿ ಮೌಲ್ಯದ ಡ್ರಗ್ಸ್ ವಶ.

ಬೆಂಗಳೂರು:  ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಸುಮಾರು 1 ಕೋಟಿ 25 ಲಕ್ಷ ರೂಪಾಯಿ ಮೌಲ್ಯದ 250 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಸಿನಿಮೀಯ ರೀತಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಮಾಯಣ್ ಯಾದವ್ (56) ಮತ್ತು ಸಬೀರ್ (51) ಬಂಧಿತ ಆರೋಪಿಗಳಾಗಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಒಡಿಶಾದಿಂದ ಪೌಲ್ಟ್ರಿ ಫೀಡ್ಸ್ ಸಾಗಣೆ ವಾಹನದಲ್ಲಿ ಗಾಂಜಾವನ್ನು ಅಡಗಿಸಿ ಬೆಂಗಳೂರಿನತ್ತ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಜಿಗಣಿ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಬೇಗೂರು ಮುಖ್ಯರಸ್ತೆಯ ಕೊಪ್ಪ ಬಳಿ ದಾಳಿ ನಡೆಸಿ ವಾಹನ ತಪಾಸಣೆ ಮಾಡಿತು. ಈ ವೇಳೆ ವಾಹನದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಭಾರೀ ಪ್ರಮಾಣದ ಗಾಂಜಾ ಪತ್ತೆಯಾಯಿತು.

ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ಪ್ರಮುಖ ಆರೋಪಿಗಳಾದ ಬಿನೋದ್ ಸಿಂಗ್ ಹಾಗೂ ಬಾಬು ಎಂಬವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದ್ದು, ಗಾಂಜಾ ಜಾಲದ ಹಿಂದಿರುವ ಇನ್ನಷ್ಟು ಆರೋಪಿಗಳ ಪತ್ತೆಗೆ ತನಿಖೆ ತೀವ್ರಗೊಳಿಸಲಾಗಿದೆ.

ಜಿಗಣಿ ಪೊಲೀಸರ ಈ ಕಾರ್ಯಾಚರಣೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಕ್ರಮ ಮಾದಕ ವಸ್ತು ಸಾಗಣೆ ವಿರುದ್ಧ ಮುಂದುವರಿದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *