‘ಗುಣಮುಖಳಾಗ್ತಾಳೆ’ ಎಂದಿದ್ದರು… ಆದರೆ ಮೃತದೇಹವಾಗಿ ಮನೆಗೆ ಬಂದ ನೇಹಾ!
ಶಿವಮೊಗ್ಗ: ಶಿವಮೊಗ್ಗದಲ್ಲಿ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ದಾಖಲಾಗಿದ್ದ 17 ವರ್ಷದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ನಿವಾಸಿ ನೇಹಾ ಮೃತ ಯುವತಿಯಾಗಿದ್ದು, ಮಗಳು ಚಿಕಿತ್ಸೆ ಪಡೆದು ಗುಣಮುಖಳಾಗಿ ಮನೆಗೆ ಮರಳುತ್ತಾಳೆ ಎಂಬ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಈ ಘಟನೆ ಭಾರೀ ಆಘಾತ ಉಂಟುಮಾಡಿದೆ.
ಮಾಹಿತಿಯ ಪ್ರಕಾರ, ಸುಮಾರು ಎಂಟು ತಿಂಗಳ ಹಿಂದೆ ಕಾಲೇಜಿಗೆ ತೆರಳುವಾಗ ಹಾವು ಕಂಡು ಬೆಚ್ಚಿಬಿದ್ದ ಬಳಿಕ ನೇಹಾಳ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿತ್ತಂತೆ. ಓದಿನಲ್ಲೂ ಆಸಕ್ತಿ ಕಳೆದುಕೊಂಡಿದ್ದ ಆಕೆ, ಆತ್ಮಹಾನಿಗೂ ಯತ್ನಿಸಿದ್ದಳು. ಈ ಹಿನ್ನೆಲೆಯಲ್ಲಿ ಪೋಷಕರು ಹಲವು ಕಡೆ ಚಿಕಿತ್ಸೆ ಕೊಡಿಸಿದ್ದರು. ಇತ್ತೀಚೆಗೆ ಶಿವಮೊಗ್ಗದ ಮಾನಸಧಾರ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರದವರು ‘ಬೇಸಿಗೆ ಶಿಬಿರಕ್ಕೆ ಸೇರಿಸಿದರೆ ಗುಣಮುಖಳಾಗುತ್ತಾಳೆ’ ಎಂದು ತಿಳಿಸಿದ್ದರಿಂದ, ಪೋಷಕರು ನೇಹಾಳನ್ನು ಕೇಂದ್ರಕ್ಕೆ ದಾಖಲಿಸಿದ್ದರು.

ಆದರೆ ದಾಖಲಾದ ಕೇವಲ ಒಂದೇ ದಿನದಲ್ಲಿ ನೇಹಾ ಮೃತಪಟ್ಟಿದ್ದಾಳೆ. ಪುನರ್ವಸತಿ ಕೇಂದ್ರದವರು ಖಾಸಗಿ ಆಸ್ಪತ್ರೆಗೆ ಬರಲು ಕರೆ ಮಾಡಿ, ನೇಹಾ ಮತ್ತೆ ಕೈ ಕೊಯ್ದುಕೊಂಡಿದ್ದಾಳೆ ಎಂದು ಮಾಹಿತಿ ನೀಡಿದ್ದರು. ಆದರೆ ಕುಟುಂಬಸ್ಥರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ.
ಘಟನೆಯ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಕೇಂದ್ರದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡದೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿರುವುದು ಹಾಗೂ ಯುವತಿಯನ್ನು ಮಾನಸಿಕ ಅಸ್ವಸ್ಥರೊಂದಿಗೆ ಇರಿಸಲಾಗಿತ್ತು ಎಂಬ ಆರೋಪಗಳು ಕೇಳಿಬಂದಿವೆ. ಕುಟುಂಬಸ್ಥರು ಇದು ಆತ್ಮಹತ್ಯೆಯೋ ಅಥವಾ ನಿರ್ಲಕ್ಷ್ಯದಿಂದಾದ ಸಾವೋ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
For More Updates Join our WhatsApp Group :




