ತುರುವೇಕೆರೆ : ತಾಲೂಕಿನ ಮೇಲಿನವಳಗೆರಹಳ್ಳಿಯ ಶಶಿಕಲಾ ಮತ್ತು ಐದು ವರ್ಷದ ಗಂಡು ಮಗು ಪಟ್ಟಣದ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಮೂರು ದಿನಗಳ ನಂತರ ಬೆಳಕಿಗೆ ಬಂದಿದೆ.
ಚಿಕ್ಕನಾಯಕನಹಳ್ಳಿ ಮೂಲದವರಾದ ಶಶಿಕಲಾ, ತಾಲೂಕಿನ ಮೇಲಿನವಳಗೆರಹಳ್ಳಿಯ ಬಸವರಾಜುರನ್ನು ಮದುವೆಯಾಗಿದ್ದರು. ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದ ದಂಪತಿ ನಡುವೆ ನಿತ್ಯ ಕಲಹ ನಡೆಯುತ್ತಿತ್ತು. ಇದರಿಂದ ಬೇಸತ್ತಿದ್ದ ಶಶಿಕಲಾ ಮಗ ಗೋಕುಲ್ನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಶಶಿಕಲಾ ಸಹೋದರ ಮೂರು ದಿನಗಳಿಂದ ತಂಗಿ ಕಾಣೆಯಾಗಿದ್ದರಿಂದ ತುರುವೇಕೆರೆ ಪೊಲೀಸ್ ಠಾಣೆಗೆ ದೂರು ನೀಡಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ಮಂಗಳವಾರ ಮುಂಜಾನೆ ೯ ಗಂಟೆಗೆ ಕೆರೆಯಲ್ಲಿ ತಾಯಿ ಮತ್ತು ಮಗನ ಮೃತದೇಹ ಕಂಡು ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆ ಕಾರ್ಯಾಚರಣೆ ಕೈಗೊಂಡು ಮೃತದೇಹಗಳನ್ನು ಹೊರತೆಗೆದಿದ್ದಾರೆ.