ಬೆಂಗಳೂರು: 2024-25 ನೇ ಸಾಲಿನ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ಖ್ಯಾತ ನಟ ಕಿಶೋರ್ ಕುಮಾರ್ ಜಿ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಪ್ರತೀ ವರ್ಷ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು ಆಯೋಜಿಸಲಾಗುತ್ತಿದೆ. ಅದರಂತೆ ಪ್ರಸಕ್ತ 2024-25 ನೇ ಸಾಲಿನ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಏರ್ಪಡಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಸಂಘಟನಾ ಮತ್ತು ಕೋರ್ ಸಮಿತಿಗಳನ್ನು ರಚಿಸಲಾಗಿದೆ.
ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆಯಲ್ಲಿನ ನಿರ್ಣಯದನ್ವಯ ಈ ಚಲನಚಿತ್ರೋತ್ಸವವನ್ನು 2025 ರ ಮಾರ್ಚ್ 1 ರಿಂದ 8 ರ ವರೆಗೆ ಏರ್ಪಡಿಸಲಾಗಿದ್ದು, ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಮಾರ್ಚ್ 1 ರಂದು ಮತ್ತು ಮಾರ್ಚ್ 8 ರಂದು ಸಮಾರೋಪ ಸಮಾರಂಭ ನಡೆಯಲಿದೆ. ಈ ಚಿತ್ರೋತ್ಸವದ ಕುರಿತು ಹೆಚ್ಚಿನ ಪ್ರಚಾರಕ್ಕಾಗಿ ಹಿಂದಿ ಮತ್ತು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿರುವ ಕನ್ನಡದ ಖ್ಯಾತ ನಟ ಕಿಶೋರ್ ಕುಮಾರ್ ಜಿ ಅವರನ್ನು ಚಿತ್ರೋತ್ಸವದ ರಾಯಭಾರಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸುಮಾರು 8 ದಿನಗಳ ಕಾಲ ಬೆಂಗಳೂರಿನ 13 ಚಿತ್ರಮಂದಿರಗಳಲ್ಲಿ ದೇಶ-ವಿದೇಶಗಳ ಅತ್ಯುನ್ನತ ಚಿತ್ರಗಳ ಪ್ರದರ್ಶನ ಹಾಗೂ ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಕಾರ್ಯಾಗಾರಗಳು, ವಿಚಾರ ಸಂಕಿರಣ ಸೇರಿ ಚಿತ್ರರಂಗಕ್ಕೆ ಪೂರಕವಾಗಿ ಇನ್ನಿತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೇ ಸಭೆ ನಡೆಸಿ, ಚಿತ್ರೋತ್ಸವದ ದಿನಾಂಕ ಘೋಷಿಸಿದ ಬಳಿಕ ಮಾಧ್ಯಮಗೋಷ್ಟಿಯಲ್ಲಿ, 16 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ‘ಸರ್ವ ಜನಾಂಗದ ಶಾಂತಿಯ ತೋಟ’ ಶೀರ್ಷಿಕೆಯಡಿ ಪ್ರಸಕ್ತ ಸಾಲಿನಲ್ಲಿ ನಡೆಯುತ್ತಿದ್ದು, ಚಿತ್ರೋತ್ಸವಕ್ಕೆ ದೇಶ-ವಿದೇಶಗಳಿಂದ ಅತ್ಯುನ್ನತ ಚಿತ್ರಗಳನ್ನು ತರುವ ಕುರಿತು ಹಾಗೂ ದೇಶ-ವಿದೇಶಗಳ ಸಿನಿಮಾ ರಂಗದ ಗಣ್ಯಾತಿಗಣ್ಯರನ್ನು ಚಿತ್ರೋತ್ಸವದಲ್ಲಿ ಭಾಗವಹಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದರು.