ಬೆಂಗಳೂರು: ಕರ್ನಾಟಕ ಹೈಕೋರ್ಟ್ನ ಏಕಸದಸ್ಯ ಪೀಠವು ಬೈಕ್ ಟ್ಯಾಕ್ಸಿ ಸೇವೆಗಳಾದ ಓಲಾ, ಉಬರ್ ಮತ್ತು ರ್ಯಾಪಿಡೊಗೆ ಜೂನ್ 15, 2025 ರವರೆಗೆ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಲು ಅನುಮತಿ ನೀಡಿದೆ.

ಈ ಸಂಬಂಧ ಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ರೊಪ್ಪೆನ್ ಟ್ರಾನ್ಸ್ಪೋರ್ಟೇಶನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (Rapido), ಮತ್ತು ಎಎನ್ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (OLA) ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರ ನೇತೃತ್ವದ ಪೀಠವು ಪುರಸ್ಕರಿಸಿದೆ
ಬೈಕ್ ಟ್ಯಾಕ್ಸಿ ನಿಷೇಧ
ಕಳೆದ ಏಪ್ರಿಲ್ 2, 2025ರಂದು ಕರ್ನಾಟಕ ಹೈಕೋರ್ಟ್, ಬೈಕ್ ಟ್ಯಾಕ್ಸಿ ಸೇವೆಗಳಿಗೆ ಸೂಕ್ತ ನಿಯಮಾವಳಿಗಳಿಲ್ಲದ ಕಾರಣ, ಆರು ವಾರಗಳ ಒಳಗೆ ಓಲಾ, ಊಬರ್ ಮತ್ತು ರ್ಯಾಪಿಡೊ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿತ್ತು. 1988 ರ ಮೋಟಾರು ವಾಹನ ಕಾಯ್ದೆ ಸೆಕ್ಷನ್ 93 ರ ಅಡಿಯಲ್ಲಿರುವ ನಿಯಮಗಳ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿಲ್ಲ. ಹೀಗಾಗಿ, ಕರ್ನಾಟಕ ಸಾರಿಗೆ ಇಲಾಖೆಗೆ ಮೋಟಾರ್ ಸೈಕಲ್ಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು ನಿರ್ದೇಶನ ನೀಡಲು ಆಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಈಗಾಗಲೇ ಬೈಕ್ ಟ್ಯಾಕ್ಸಿ ಕಾರ್ಯನಿರ್ವಹಣೆ ಮಾಡುತ್ತಿವೆ ಎಂಬ ಅಂಶವನ್ನು ಗಮನಿಸಿದ ನ್ಯಾಯಪೀಠವು ಏಪ್ರಿಲ್ 2 ರಿಂದ ಆರು ವಾರ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ. ಆ ನಂತರ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಸೂಚನೆ ನೀಡಿತ್ತು. ಅಲ್ಲದೇ ರಾಜ್ಯ ಸರ್ಕಾರಕ್ಕೆ ಮೂರು ತಿಂಗಳ ಒಳಗೆ ಬೈಕ್ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸಲು ಸೂಚನೆ ನೀಡಲಾಗಿತ್ತು.
ಈ ಆದೇಶದ ವಿರುದ್ಧ ಊಬರ್ ಇಂಡಿಯಾ, ರ್ಯಾಪಿಡೊ ಮತ್ತು ಓಲಾ ಸಂಸ್ಥೆಗಳು ಮಧ್ಯಂತರ ರಿಲೀಫ್ ಕೋರಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದವು. ತಮ್ಮ ಸೇವೆಯನ್ನು ತಕ್ಷಣ ಸ್ಥಗಿತಗೊಳಿಸುವುದರಿಂದ ಗ್ರಾಹಕರಿಗೆ ತೊಂದರೆಯಾಗುವುದಲ್ಲದೆ, ರೈಡರ್ಗಳ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
ಹೈಕೋರ್ಟ್ ಆದೇಶ ಏನು?
ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರ ಏಕಸದಸ್ಯ ಪೀಠವು ಏಪ್ರಿಲ್ 29, 2025ರಂದು ಈ ಅರ್ಜಿಗಳನ್ನು ವಿಚಾರಣೆ ನಡೆಸಿ, ಜೂನ್ 15, 2025ರವರೆಗೆ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮುಂದುವರಿಸಲು ಅವಕಾಶ ನೀಡಿತು. ಈ ತಾತ್ಕಾಲಿಕ ರಿಲೀಫ್ನಿಂದ ಓಲಾ, ಊಬರ್ ಮತ್ತು ರ್ಯಾಪಿಡೊ ಸೀಮಿತವಾದ ಅವಧಿಯವರೆಗೆ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಲು ಅನುವು ಮಾಡಿಕೊಡಲಾಗಿದೆ.
ಕೋರ್ಟ್ನ ಈ ಆದೇಶವು ರಾಜ್ಯ ಸರ್ಕಾರಕ್ಕೆ ಬೈಕ್ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದ ಸ್ಪಷ್ಟ ನಿಯಮಾವಳಿಗಳನ್ನು ರೂಪಿಸಲು ಒತ್ತಡ ಹೇರಿದೆ. ಸರ್ಕಾರವು ಈಗ ಜೂನ್ 15ರ ಒಳಗೆ ನಿಯಮಗಳನ್ನು ರೂಪಿಸಿ, ಅವುಗಳನ್ನು ಜಾರಿಗೊಳಿಸಬೇಕಾಗಿದೆ, ಇಲ್ಲದಿದ್ದರೆ ಈ ಸೇವೆಗಳು ಮತ್ತೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.