ತುಮಕೂರು || Gram Panchayats ಉಪ ಚುನಾವಣೆ : ರಾಜ್ಯ ಚುನಾವಣಾ ಆಯೋಗ ಮಹತ್ವದ ಘೋಷಣೆ

ತುಮಕೂರು || Gram Panchayats ಉಪ ಚುನಾವಣೆ : ರಾಜ್ಯ ಚುನಾವಣಾ ಆಯೋಗ ಮಹತ್ವದ ಘೋಷಣೆ

ತುಮಕೂರು : ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 13 ಸದಸ್ಯ ಸ್ಥಾನಗಳಿಗೆ ಮೇ 25 ರಂದು ಉಪ ಚುನಾವಣೆ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

13 ಕ್ಷೇತ್ರಗಳ ವಿವರ

ಜಿಲ್ಲೆಯ ತುಮಕೂರು ತಾಲ್ಲೂಕು 37-ಬೆಳಗುಂಬ ಗ್ರಾಮ ಪಂಚಾಯತಿ ವ್ಯಾಪ್ತಿಯ ವಡ್ಡರಹಳ್ಳಿ ಕ್ಷೇತ್ರ ಹಾಗೂ 38-ಹೆಗ್ಗೆರೆ ಗ್ರಾ.ಪಂ.ಯ ವಕ್ಕೋಡಿ-1; ಗುಬ್ಬಿ ತಾಲ್ಲೂಕು 26-ಕುನ್ನಾಲ ಗ್ರಾ.ಪಂ.ಯ ಜೀಗನಹಳ್ಳಿ; ತಿಪಟೂರು ತಾಲ್ಲೂಕು 13-ಹಿಂಡಿಸ್ಕೆರೆ ಗ್ರಾ.ಪಂ.ಯ ಹಿಂಡಿಸ್ಕೆರೆ; ಚಿಕ್ಕನಾಯಕನಹಳ್ಳಿ ತಾಲ್ಲೂಕು 23-ಮುದ್ದೇನಹಳ್ಳಿ ಗ್ರಾ.ಪಂ.ಯ ಆಲದಕಟ್ಟೆ; ತುರುವೇಕೆರೆ ತಾಲ್ಲೂಕು 26-ಹುಲ್ಲೇಕೆರೆ ಗ್ರಾ.ಪಂ.ಯ ಬಳ್ಳೆಕಟ್ಟೆ; ಮಧುಗಿರಿ ತಾಲ್ಲೂಕು 3-ದೊಡ್ಡವೀರಗೊಂಡನಹಳ್ಳಿ ಗ್ರಾ.ಪಂ.ಯ ಗುಂಡ್ಲಹಳ್ಳಿ, 5-ಮರುವೇಕೆರೆ ಗ್ರಾ.ಪಂ.ಯ ಬಂದ್ರೇಹಳ್ಳಿ ಹಾಗೂ 18-ಮುದ್ದೇನಹಳ್ಳಿ ಗ್ರಾ.ಪಂ.ಯ ಪೋಲೇನಹಳ್ಳಿ;  ಪಾವಗಡ ತಾಲ್ಲೂಕು 7-ಕನ್ನಮೇಡಿ ಗ್ರಾ.ಪಂ.ಯ ಕಿಲಾರ್ಲಹಳ್ಳಿ, 8-ಬ್ಯಾಡನೂರು ಗ್ರಾ.ಪಂ.ಯ ಗುಂಡ್ಲಾರಹಳ್ಳಿ, 32-ಅರಸೀಕೆರೆ ಗ್ರಾ.ಪಂ.ಯ ಅರಸೀಕೆರೆ-2 ಹಾಗೂ 30-ಚನ್ನಕೇಶವಪುರ ಗ್ರಾ.ಪಂ.ಯ ಕೊತ್ತೂರು-2 ಸೇರಿದಂತೆ ಒಟ್ಟು 13 ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ  ನಡೆಯಲಿದೆ.

ಉಪ ಚುನಾವಣಾ ವೇಳಾಪಟ್ಟಿ

ಉಪ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ವೇಳಾಪಟ್ಟಿಯನ್ವಯ ಮೇ 8ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಗುವುದು. ನಾಮಪತ್ರಗಳನ್ನು ಸಲ್ಲಿಸಲು ಮೇ 14ರಂದು ಕಡೆಯ ದಿನವಾಗಿದ್ದು, ಮೇ 15ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು.  ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಮೇ 17 ಕಡೆಯ ದಿನವಾಗಿದೆ.  ಅವಶ್ಯವಿದ್ದರೆ ಮೇ 25ರಂದು ಭಾನುವಾರ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಸಲಾಗುವುದು. ಮರು ಮತದಾನದ ಅವಶ್ಯವಿದ್ದಲ್ಲಿ ಮೇ 27ರಂದು  ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನವನ್ನು ನಡೆಸಲಾಗುವುದು. ಮತ ಎಣಿಕೆಯನ್ನು ಮೇ 28ರಂದು ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಸಲಾಗುವುದು.

ನೀತಿ ಸಂಹಿತೆ ಜಾರಿ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 308ಎಸಿ ರನ್ವಯ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇ 8 ರಿಂದ 28ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.  ನೀತಿ ಸಂಹಿತೆಯು ಬರ ಕಾಮಗಾರಿ, ಪ್ರವಾಹ ಇತ್ಯಾದಿ ಪ್ರಕೃತಿ ವಿಕೋಪಗಳಿಗೆ ಅನ್ವಯಿಸುವುದಿಲ್ಲ.

ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ:248:ಇಜಿಪಿ:2015, ದಿನಾಂಕ 19.03.2015 ರನ್ವಯ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ “NOTA” ಅನ್ವಯಿಸುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *