ಸಿಗರೇಟ್ ಜಗಳಕ್ಕೆ ಯುವಕ ಬ*!

ಸಿಗರೇಟ್ ಜಗಳಕ್ಕೆ ಯುವಕ ಬ*!

ಮಂಡ್ಯದಲ್ಲಿ ಎರಡು ಪ್ರತ್ಯೇಕ ಹಿಂಸಾಚಾರ – ಹಲವರಿಗೆ ಗಾಯ.

ಮಂಡ್ಯ: ಕ್ಷುಲ್ಲಕ ಕಾರಣಗಳು ಹಾಗೂ ಆಸ್ತಿ ವಿವಾದಗಳಿಂದ ಮಂಡ್ಯದಲ್ಲಿ ಎರಡು ಪ್ರತ್ಯೇಕ ಹಿಂಸಾತ್ಮಕ ಘಟನೆಗಳು ನಡೆದಿದ್ದು, ಒಬ್ಬ ಯುವಕ ಸಾವನ್ನಪ್ಪಿದ್ದಾನೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮದ್ದೂರು ಮತ್ತು ಕೆ.ಆರ್.ಪೇಟೆಯಲ್ಲಿ ಮಾರಾಮಾರಿ ನಡೆದಿದ್ದು, ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಎರಡೂ ಘಟನೆಗಳಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜಿ ಸಂಧಾನ ನಡೆಯುತ್ತಿರುವಾಗಲೇ ಮತ್ತೆ ಗಲಾಟೆ

ಮದ್ದೂರು ಪಟ್ಟಣದ ಪಟೇಲ್ ಸಾಮಿಲ್ ಸಮೀಪ ಎರಡು ಯುವಕರ ಗುಂಪುಗಳ ನಡುವೆ ಗಲಾಟೆ ನಡೆದಿದೆ. ಪರಿಣಾಮವಾಗಿ ಮರಳಿಗ ಗ್ರಾಮದ ಯಶವಂತ್ ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗೊರವನಹಳ್ಳಿ ಗ್ರಾಮದ ದರ್ಶನ್ ಮತ್ತು ಸಚಿನ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆಲ ದಿನಗಳ ಹಿಂದೆ ಬಾರ್‌ನಲ್ಲಿ ಸಿಗರೇಟ್ ವಿಚಾರವಾಗಿ ಎರಡು ಗುಂಪಿನ ಯುವಕರ ನಡುವೆ ಗಲಾಟೆ ನಡೆದಿತ್ತು. ಇದೇ ವಿಷಯಕ್ಕೆ ಕಳೆದ ರಾತ್ರಿ ರಾಜಿ ಮಾತುಕತೆ ನಡೆಯುವ ವೇಳೆ ಮತ್ತೆ ಜಗಳವಾಗಿದೆ. ಈ ಸಂದರ್ಭದಲ್ಲಿ ಯುವಕರು ದೊಣ್ಣೆಗಳಿಂದ ಪರಸ್ಪರ ದಾಳಿ ನಡೆಸಿಕೊಂಡಿದ್ದು, ಪರಿಣಾಮವಾಗಿ ಯಶವಂತ್ ಮೃತಪಟ್ಟಿದ್ದಾನೆ. ಮದ್ದೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಜೆ ಶೋಭಾರಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಸ್ತಿ ಸಂಬಂಧ ಇನ್ನೊಂದು ಗಲಾಟೆ!

ಇನ್ನೊಂದು ಘಟನೆ ಕೆ.ಆರ್.ಪೇಟೆ ತಾಲೂಕಿನ ನಾಟನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪಿತ್ರಾರ್ಜಿತ ಆಸ್ತಿ ಸಂಬಂಧ ರಸ್ತೆ ಬಿಡುವ ವಿಚಾರವಾಗಿ ದಾಯಾದಿಗಳ ನಡುವೆ ಉಂಟಾದ ಜಗಳ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಈ ವೇಳೆ ಸಂಬಂಧಿಕರು ಮಾರಕಾಸ್ತ್ರಗಳಿಂದ ಪರಸ್ಪರ ದಾಳಿ ನಡೆಸಿಕೊಂಡಿದ್ದಾರೆ. ಪರಿಣಾಮವಾಗಿ ಸೋಮೇಗೌಡ, ವಸಂತ್ ಮತ್ತು ನಿಶಾಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಪ್ರಕರಣದಲ್ಲಿ ಉಗ್ರೇಗೌಡ, ವೇಣು, ನೂತನ್, ಪ್ರಕಾಶ್ ಮತ್ತು ಸೋಮೇಶ್ ಎಂಬವರ ವಿರುದ್ಧ ದೂರು ದಾಖಲಾಗಿದ್ದು, ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *