ವೊರ್ಲಿ: ಮುಂಬೈನ ವೊರ್ಲಿಯಲ್ಲಿ ಜುಲೈ 20 ರಂದು ಸ್ಕೂಟರ್ ಗೆ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದ 28 ವರ್ಷದ ವ್ಯಕ್ತಿಯೊಬ್ಬರು ವಾರದ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಥಾಣೆ ಮೂಲದ ಸಾರಿಗೆ ಸಂಸ್ಥೆಯೊಂದರಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ವಿನೋದ್ ಲಾಡ್ ತಮ್ಮ ಸೋದರ ಸಂಬಂಧಿಯೊಂದಿಗೆ ವಾಸವಾಗಿದ್ದ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ವೊರ್ಲಿಯ ಖಾನ್ ಅಬ್ದುಲ್ ಗಫರ್ ಖಾನ್ ರಸ್ತೆಯಲ್ಲಿ ಕಾರು ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳದಲ್ಲಿದ್ದವರು ಲಾಡ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ಮುಂಬೈ ಸೆಂಟ್ರಲ್ನ ನಾಯರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದೇ ರೀತಿ ಜುಲೈ 9 ರಂದು ವೊರ್ಲಿಯ ಅನ್ನಿ ಬೆಸೆಂಟ್ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮಹಿಳೆ ಕಾವೇರಿ ನಖ್ವಾ ಸಾವನ್ನಪ್ಪಿದರು ಮತ್ತು ಆಕೆಯ ಪತಿ ಪ್ರದೀಪ್ಗೆ ತೀವ್ರವಾಗಿ ಗಾಯಗೊಂಡಿದ್ದರು. ಸಾಕ್ಷ್ಯಧಾರ ನಾಶಕ್ಕೆ ಪ್ರಯತ್ನ ಆರೋಪದ ಮೇಲೆ ಆರೋಪಿ ಮಿಹಿರ್ ಶಾ, ಆತನ ಕುಟುಂಬದ ಚಾಲಕ ಮತ್ತು ತಂದೆಯನ್ನು ಬಂಧಿಸಲಾಗಿದೆ.