ಇಬ್ಬರು ಮದುವೆ, ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ – ಪ್ರಕರಣ ದಾಖಲು.
ಆನೇಕಲ್: ಮದುವೆಯನ್ನೇ ಒಂದು ವ್ಯವಹಾರ ಮಾಡಿಕೊಂಡಿದ್ದ ಕಾಮುಕ ಇಂಜಿನಿಯರ್ ಒಬ್ಬನ ಸರಣಿ ವಂಚನೆಗಳು ಬಯಲಾಗಿವೆ. ಇಬ್ಬರು ಯುವತಿಯರನ್ನು ಮದುವೆಯಾಗಿ, ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಅಮಾಯಕ ಹೆಣ್ಣುಮಕ್ಕಳ ಜೀವನದ ಜೊತೆ ಆಟವಾಡುತ್ತಿದ್ದ ರವಿ ಎಂಬಾತನ ವಿರುದ್ಧ ಈಗ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆಯ ಜಾಲ ಆರಂಭವಾಗಿದ್ದು ಹೇಗೆ?
ತುಮಕೂರಿನ ಚಿಕ್ಕನಾಯಕನಹಳ್ಳಿ ಮೂಲದ ರವಿ, ಜಿಗಣಿ ಬಳಿಯ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. 2024ರ ಜನವರಿಯಲ್ಲಿ ಈತ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಮದುವೆಯಾದ ಆರಂಭದಿಂದಲೇ ಪತ್ನಿಯ ಜೊತೆ ವಿಕೃತವಾಗಿ ವರ್ತಿಸುತ್ತಿದ್ದ ಈತ, ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ.
ಪತ್ನಿ ಗರ್ಭಿಣಿಯಿರುವಾಗಲೇ ಮತ್ತೊಂದು ಹೆಣ್ಣಿನ ಹುಡುಕಾಟ
ಮೊದಲ ಪತ್ನಿ ಗರ್ಭಿಣಿಯಾದ ಸಂದರ್ಭದಲ್ಲಿ ಆಕೆಯನ್ನು ಪೋಷಿಸಬೇಕಿದ್ದ ರವಿ, ತನಗೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ತನ್ನ ಕುಟುಂಬದವರೊಟ್ಟಿಗೆ ಸೇರಿ ಬೇರೆ ಹುಡುಗಿ ನೋಡಲು ಶುರು ಮಾಡಿದ್ದ. ಅಷ್ಟೇ ಅಲ್ಲದೆ, ಅಕ್ಟೋಬರ್ ತಿಂಗಳಲ್ಲಿ ಮತ್ತೊಬ್ಬ ಯುವತಿಯ ಜೊತೆ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದ. ಈ ವಿಚಾರ ತಿಳಿದ ಮೊದಲ ಪತ್ನಿ, ನಿಶ್ಚಿತಾರ್ಥ ಮಾಡಿಕೊಂಡ ಯುವತಿಯ ಕುಟುಂಬಕ್ಕೆ ಸತ್ಯ ತಿಳಿಸಿದ್ದರು. ಆ ಸಮಯದಲ್ಲಿ ಆ ಯುವತಿಯ ಮನೆಯವರು ರವಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು.
ಮೊದಲ ಪತ್ನಿ ಹೆರಿಗೆಗೆ ಹೋದಾಗ ಎರಡನೇ ಮದುವೆ
ಧರ್ಮದೇಟು ತಿಂದಿದ್ದರೂ ಬುದ್ಧಿ ಕಲಿಯದ ರವಿ, ಮೊದಲ ಪತ್ನಿ ಹೆರಿಗೆಗಾಗಿ ತವರು ಮನೆಗೆ ಹೋದಾಗ ಮತ್ತೊಂದು ಮದುವೆಯಾಗಿದ್ದಾನೆ. 2025ರ ಡಿಸೆಂಬರ್ನಲ್ಲಿ ಮತ್ತೊಬ್ಬ ಯುವತಿಯನ್ನು ತನಗೆ ಮದುವೆಯಾಗಿಲ್ಲ ಎಂದು ನಂಬಿಸಿ ಮದುವೆಯಾಗಿದ್ದ. ಈ ಎರಡನೇ ಮದುವೆಯ ವಿಷಯ ತಿಳಿದ ಮೊದಲ ಪತ್ನಿ ಮತ್ತು ಆಕೆಯ ಕುಟುಂಬಸ್ಥರು ರವಿಯ ಮನೆಗೆ ನುಗ್ಗಿ ಆತನಿಗೆ ಸಾರ್ವಜನಿಕವಾಗಿ ಹಲ್ಲೆ ಮಾಡಿ ಬುದ್ಧಿ ಕಲಿಸಿದ್ದಾರೆ.
ಪ್ರಸ್ತುತ ಆರೋಪಿ ರವಿ ಪರಾರಿಯಾಗಿದ್ದು, ಜಿಗಣಿ ಪೊಲೀಸರು ವಂಚನೆ ಮತ್ತು ಬಹುಪತ್ನಿತ್ವದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
For More Updates Join our WhatsApp Group :




