ಯಾದಗಿರಿಯಲ್ಲಿ ಜಮೀನು ಜಗಳ ರಕ್ತಪಾತಕ್ಕೆ ತಿರುಗಿತು.
ಯಾದಗಿರಿ: ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಕೇವಲ ಎರಡು ಎಕರೆ ಜಮೀನಿಗಾಗಿ ಶುರುವಾದ ಜಗಳ ಈಗ ಹತ್ತಾರು ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದೆ. ಜಮೀನು ವಿವಾದಕ್ಕೆ ಯುವಕನೋರ್ವನ ಭೀಕರ ಕೊಲೆಯಾಗಿದ್ದರೆ, ಅದರ ಪ್ರತೀಕಾರವಾಗಿ ಆರೋಪಿಗಳ ಮನೆಗೆ ಬೆಂಕಿ ಹಚ್ಚಿದ ಕೊಲೆಯಾದವನ ಸಹೋದರ ಕೂಡ ಈಗ ಜೈಲು ಪಾಲಾಗಿದ್ದಾನೆ. ಮಲ್ಲಪ್ಪ ಮತ್ತು ಅವರ ಅಣ್ಣ ಹನುಮಂತರಾಯನ ಕುಟುಂಬಗಳ ಮಧ್ಯೆ ಕಳೆದ ನಾಲ್ಕು ವರ್ಷಗಳಿಂದ 2 ಎಕರೆ ಜಮೀನಿನ ದಾರಿ ವಿಚಾರವಾಗಿ ನಿರಂತರ ಜಗಳ ನಡೆಯುತ್ತಿತ್ತು.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಹನುಮಂತರಾಯನ ಕುಟುಂಬ ಮತ್ತು ಸಂಬಂಧಿಕರು ಸೇರಿ 27 ವರ್ಷದ ಪರಮೇಶ್ವರ ಎಂಬಾತನನ್ನು ತಲ್ವಾರ್ ಮತ್ತು ದೊಣ್ಣೆಗಳಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದರು. ಈ ವೇಳೆ ಅಣ್ಣನನ್ನು ಕಾಪಾಡಲು ಹೋದ ರೇವಣಸಿದ್ದನಿಗೂ ಗಂಭೀರ ಗಾಯಗಳಾಗಿದ್ದವು. ಘಟನೆ ನಡೆದ ಒಂದೇ ದಿನದಲ್ಲಿ ಕೆಂಭಾವಿ ಪೊಲೀಸರು ಪ್ರಮುಖ ಆರೋಪಿಗಳಾದ ಪರಮಣ್ಣ, ದೇವಿಂದ್ರಪ್ಪ, ಚನ್ನಪ್ಪ ಮತ್ತು ಮಹಾದೇವಪ್ಪ ಸೇರಿ ನಾಲ್ವರನ್ನು ಬಂಧಿಸಿದ್ದರು.
ಅಣ್ಣನ ಸಾವಿನಿಂದ ಕೆರಳಿದ್ದ ಸಹೋದರ ರೇವಣಸಿದ್ದ, ಆರೋಪಿಗಳ ಕುಟುಂಬ ಊರು ಬಿಟ್ಟಿದ್ದ ಸಮಯ ಸಾಧಿಸಿ ಅವರ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಅಗ್ನಿಕಾಂಡದಲ್ಲಿ ಮನೆಯಲ್ಲಿದ್ದ ಧಾನ್ಯಗಳು, ಬಟ್ಟೆ ಬರೆ ಸೇರಿ ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಭಸ್ಮವಾಗಿವೆ. ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ರೇವಣಸಿದ್ದನನ್ನು ಕೂಡ ಪೊಲೀಸರು ಬಂಧಿಸಿದ್ದು, ಅಣ್ಣನ ಕಳೆದುಕೊಂಡ ದುಃಖದಲ್ಲಿದ್ದ ಕುಟುಂಬದ ಮತ್ತೊಬ್ಬ ಸದಸ್ಯ ಈಗ ಕಂಬಿ ಎಣಿಸುವಂತಾಗಿದೆ.
For More Updates Join our WhatsApp Group :




