ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಬ್ರೇಕ್.!

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಬ್ರೇಕ್.!

ಖಾಲಿ ಹುದ್ದೆಗಳ ಭರ್ತಿಗೆ ಹೋರಾಟಕ್ಕಿಳಿದವರ ಬಂಧನ.

ಧಾರವಾಡ: ರಾಜ್ಯದಲ್ಲಿ ಖಾಲಿ ಇರುವ ಸರಕಾರಿ ಹುದ್ದೆಗಳ ಭರ್ತಿಗಾಗಿ ಧಾರವಾಡದಲ್ಲಿ ನಿರಂತರವಾಗಿ ಉದ್ಯೋಗಾಕಾಂಕ್ಷಿಗಳು ಹೋರಾಟ  ಮಾಡುತ್ತಲೇ ಬಂದಿದ್ದಾರೆ. ಸಾವಿರಾರು ಉದ್ಯೋಗಾಕಾಂಕ್ಷಿಗಳು ಹೋರಾಟ ಮಾಡಿದ ಬಳಿಕವಷ್ಟೇ ಸರಕಾರ ಹುದ್ದೆಗಳ ಭರ್ತಿ ಮಾಡಿಕೊಳ್ಳುವುದಾಗಿ ಘೋಷಿಸಿತ್ತು. ಇದೀಗ ಹೋರಾಟದ ಮುಂದುವರೆದ ಭಾಗವಾಗಿ ಇಂದು ವಿದ್ಯಾರ್ಥಿಗಳ ಸಂಘಟನೆಯಿಂದ ಹೋರಾಟವನ್ನು ಆಯೋಜಿಸಲಾಗಿತ್ತು. ಆದರೆ ಹೋರಾಟಕ್ಕೆ ಅನುಮತಿ ನಿರಾಕರಿಸಿದ ಪೊಲೀಸರು, ಬೆಳಿಗ್ಗೆಯೇ ಮುಖಂಡರನ್ನು ಬಂಧಿಸಿ, ಹೋರಾಟಕ್ಕೆ ಬ್ರೇಕ್ ಹಾಕಿದರು.

ರಾಜ್ಯದಲ್ಲಿ ಖಾಲಿ ಇರುವ 2.84 ಲಕ್ಷ ಸರಕಾರಿ ಹುದ್ದೆಗಳ ಭರ್ತಿಗಾಗಿ ಆಗ್ರಹಿಸಿ ವಿದ್ಯಾರ್ಥಿಗಳ ಸಂಘಟನೆ ಕರೆ ಕೊಟ್ಟಿತ್ತು. ಈ ಕರೆಗೆ ರೈತ ಸಂಘಟನೆ ಹಾಗೂ ಇತರೆ ಎಡಪಂಥೀಯ ಸಂಘಟನೆಗಳು ಕೂಡ ಸಾಥ್ ನೀಡಿದ್ದವು. ಆದರೆ ಹೋರಾಟಕ್ಕೆ ಉಪನಗರ ಠಾಣೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಈ ಹಿಂದೆ ನಡೆದಿದ್ದ ಅನೇಕ ಹೋರಾಟದ ವೇಳೆಯಲ್ಲಿ ಅಹಿತಕರ ಘಟನೆಗಳು ನಡೆದಿದ್ದವಲ್ಲದೇ ಸಾರ್ವಜನಿಕರಿಗೆ ಸಮಸ್ಯೆಯಾಗಿತ್ತು. ಇದನ್ನೇ ಕಾರಣವಾಗಿಟ್ಟುಕೊಂಡು ಪೊಲೀಸರು ಅನುಮತಿ ನಿರಾಕರಿಸಿದ್ದರು. ಆದರೂ ಹೋರಾಟ ಮಾಡೋದಾಗಿ ವಿದ್ಯಾರ್ಥಿ ಸಂಘಟನೆ ಮುಖಂಡರು ಹೇಳಿದ್ದರು.

ಐವರು ಮುಖಂಡರ ಬಂಧನ 

ಅಲ್ಲದೇ ಅಂಬೇಡ್ಕರ್ ಜಯಂತಿ ದಿನವೇ ನಮ್ಮ ನಡಿಗೆ ಭೀಮನೆಡೆಗೆ ಘೋಷವಾಕ್ಯದಡಿ ಪ್ರತಿಭಟನೆ ನಡೆಸಲು ಯೋಚಿಸಿದ್ದರು. ಆದರೆ ಪೊಲೀಸರು ಅನುಮತಿ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಮುಖಂಡರು ಹೋರಾಟ ಮಾಡಿಯೇ ತೀರೋದಾಗಿ ಹೇಳಿ ಬೀದಿಗೆ ಇಳಿದರು. ಈ ವೇಳೆ ಯಲ್ಲಪ್ಪ ಹೆಗಡೆ, ನಾಗರಾಜ ಸೇರಿದಂತೆ ಐವರು ಮುಖಂಡರನ್ನು ಪೊಲೀಸರು ಜಯನಗರ ವೃತ್ತದ ಬಳಿ ಬಂಧಿಸಿ, ಕರೆದೊಯ್ದರು. ಪೊಲೀಸರ ಈ ಕ್ರಮಕ್ಕೆ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಹೋರಾಟಕ್ಕೆ ದಲಿತ ಸಂಘಟನೆಗಳು ಕೂಡ ವಿರೋಧ ವ್ಯಕ್ತಪಡಿಸಿದ್ದವು. ಅಂಬೇಡ್ಕರ್ ಜಯಂತಿ ದಿನ ಇಂಥ ಹೋರಾಟ ಮಾಡುವ ಅವಶ್ಯಕತೆ ಇದೆಯೇ ಅನ್ನೋದು ದಲಿತ ಸಂಘಟನೆಗಳ ಪ್ರಶ್ನೆಯಾಗಿತ್ತು. ಈ ಎಲ್ಲ ಕಾರಣಗಳಿಂದ ಪೊಲೀಸರು ಹೋರಾಟಕ್ಕೆ ಬ್ರೇಕ್ ಹಾಕಿದ್ದರು. ಆದರೆ ಇದೀಗ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ ಅನ್ನೋ ಆರೋಪಕ್ಕೆ ಪೊಲೀಸರು ಗುರಿಯಾಗಿದ್ದಂತೂ ಸತ್ಯ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *