SSLC ಫಲಿತಾಂಶದ ಬಗ್ಗೆ ಆತಂಕ.!

SSLC ಫಲಿತಾಂಶದ ಬಗ್ಗೆ ಆತಂಕ.!

ಹೈಕೋರ್ಟ್ ಆದೇಶದಿಂದ ಹೊಸ ಗೊಂದಲ.!

ಬೆಂಗಳೂರು: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಶಿಕ್ಷಣ ಇಲಾಖೆಯ ಗೊಂದಲದ ನಿರ್ಧಾರಗಳಿಗೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ವಿದ್ಯಾರ್ಥಿಗಳಿಗೆ ಅಂಕಗಳನ್ನೇ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ, ಇದುವೇ ಈಗ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕಾರಣವಾಗಿದೆ. ಶಿಕ್ಷಣ ಇಲಾಖೆ ಪರೀಕ್ಷೆಗೆ ಕೆಲವೇ ದಿನಗಳಿರುವಾಗ ಇಂಥ ಗೊಂದಲದ ನಿರ್ಧಾರ ಪ್ರಕಟಿಸಿದ್ದರಿಂದ ವಿದ್ಯಾರ್ಥಿಗಳು ಆ ಪರೀಕ್ಷೆಯನ್ನು ಹಗುರವಾಗಿ ಪರಿಗಣಿಸಿದ್ದಾರೆ. ಈಗ ಕೋರ್ಟ್ ಅಂಕ ನೀಡಲು ಆದೇಶಿಸಿದ್ದರಿಂದ ಫಲಿತಾಂಶದಲ್ಲಿ ಕುಸಿತ ಆಗಬಹುದು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಗೊಂದಲ ಸೃಷ್ಟಿಸಿದ ಸರ್ಕಾರದ ನಡೆ

ಪರೀಕ್ಷೆ ಆರಂಭವಾಗುವ ಕೇವಲ ಎರಡು ದಿನಗಳ ಮೊದಲು ಶಿಕ್ಷಣ ಸಚಿವರು ಪತ್ರಿಕಾಗೋಷ್ಠಿ ನಡೆಸಿ, ತೃತೀಯ ಭಾಷೆಗೆ ಅಂಕಗಳ ಬದಲಾಗಿ ಗ್ರೇಡ್ ವ್ಯವಸ್ಥೆ ಜಾರಿಗೆ ತರುವುದಾಗಿ ಘೋಷಿಸಿದ್ದರು. ಸರ್ಕಾರದ ಈ ಆಕಸ್ಮಿಕ ನಿರ್ಧಾರದಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ‘ಗ್ರೇಡ್ ತಾನೇ ಬರುವುದು’ ಎಂಬ ಉದಾಸೀನತೆಯಿಂದ ಅನೇಕರು ಪರೀಕ್ಷೆ ಬರೆದಿದ್ದರು. ಆದರೆ ಈಗ ಕೋರ್ಟ್ ಅಂಕ ನೀಡುವಂತೆ ಆದೇಶಿಸಿರುವುದು ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಫಲಿತಾಂಶ ಕುಸಿತದ ಆತಂಕ ಮೂಡಿಸಿದೆ.

ತೃತೀಯ ಭಾಷೆ ಗ್ರೇಡ್ ವ್ಯವಸ್ಥೆ ವಿವಾದದ ಹಿನ್ನೆಲೆ

ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಎಸ್‌ಎಸ್‌ಎಲ್‌ಸಿ ಹಿಂದಿ ಹಾಗೂ ಇತರೆ ತೃತೀಯ ಭಾಷಾ ವಿಷಯಗಳಿಗೆ ಅಂಕಗಳ ಬದಲಾಗಿ ಗ್ರೇಡ್ ನೀಡುವ ಬಗ್ಗೆ ಘೋಷಣೆ ಮಾಡಿತ್ತು. ಅಂತಿಮ ಕ್ಷಣದಲ್ಲಿ ತಂದ ಈ ಬದಲಾವಣೆ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.

ಪರೀಕ್ಷೆಯ ಮಧ್ಯದಲ್ಲಿ ಅಥವಾ ಫಲಿತಾಂಶದ ಹಂತದಲ್ಲಿ ಇಂತಹ ಪ್ರಮುಖ ನೀತಿ ಬದಲಾವಣೆಗಳನ್ನು ಮಾಡುವುದು ಕಾನೂನುಬಾಹಿರ ಎಂದು ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಈ ವಾದವನ್ನು ಎತ್ತಿಹಿಡಿದಿದ್ದು, ಶೈಕ್ಷಣಿಕ ವರ್ಷದ ಆರಂಭದಲ್ಲೇ ಇಂತಹ ಬದಲಾವಣೆಗಳನ್ನು ತಿಳಿಸಬೇಕೆಂದು ಸರ್ಕಾರಕ್ಕೆ ಕಿವಿಮಾತು ಹೇಳಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *