ಸುರಂಗ-ಮೇಲ್ಸೇತುವೆ ಯೋಜನೆಗೆ ರಕ್ಷಣಾ ಜಾಗ ಬೇಡಿಕೆ
ನವದೆಹಲಿ : ಡಿ.ಕೆ. ಶಿವಕುಮಾರ್ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಶುಕ್ರವಾರ ಭೇಟಿ ಮಾಡಿ ಬೆಂಗಳೂರಿನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ರಕ್ಷಣಾ ಇಲಾಖೆ ಭೂಮಿಯನ್ನು ಒದಗಿಸುವಂತೆ ಹಾಗೂ ವಿಮಾನ ನಿಲ್ದಾಣಗಳ ಸುತ್ತಮುತ್ತಲ ಕಟ್ಟಡ ಎತ್ತರದ ನಿರ್ಬಂಧಗಳನ್ನು ಸಡಿಲಿಸುವಂತೆ ಮನವಿ ಸಲ್ಲಿಸಿದ್ದಾರೆ.
ನಿರ್ಬಂಧ ಸಡಿಲಗೊಳಿಸುವಂತೆ ಕೋರಿಕೆ
ನವದೆಹಲಿಯಲ್ಲಿ ನಡೆದ ಈ ಸಭೆಯಲ್ಲಿ ಬೆಂಗಳೂರು ನಗರದ ವೇಗವಾದ ಅಭಿವೃದ್ಧಿಗೆ ಕೆಲವು ರಕ್ಷಣಾ ನೀತಿಗಳು ಅಡ್ಡಿಯಾಗುತ್ತಿರುವ ಬಗ್ಗೆ ಶಿವಕುಮಾರ್ ವಿವರಿಸಿದ್ದಾರೆ. ವಿಶೇಷವಾಗಿ ಹೆಚ್ಎಎಲ್ ವಿಮಾನ ನಿಲ್ದಾಣ ಹಾಗೂ ಯಲಹಂಕ ವಾಯುನೆಲೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನೀಡಲಾಗುತ್ತಿರುವ ನಿರಾಕ್ಷೇಪಣಾ ಪತ್ರ (NOC) ಪ್ರಕ್ರಿಯೆಯಲ್ಲಿ ಕಠಿಣ ನಿಯಮಗಳನ್ನು ವಿಧಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಅಭಿವೃದ್ಧಿಗೆ ಇರುವ ನಿರ್ಬಂಧಗಳ ಕುರಿತು ವಿವರಿಸಿರುವ ಡಿಸಿಎಂ
ಬೆಂಗಳೂರಿನಲ್ಲಿ ನಾಲ್ಕು ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಹೆಚ್ಎಎಲ್ ಹಾಗೂ ಯಲಹಂಕ ವಾಯುನೆಲೆ ರಕ್ಷಣಾ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ವಿಮಾನ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಲು ವಿಮಾನ ನಿಲ್ದಾಣ ಅಧಿಕಾರಿಗಳಿಂದ ನಿರಾಕ್ಷೇಪಣ ಪತ್ರ ಪಡೆಯಬೇಕಾಗಿದೆ. ವಿಮಾನ ನಿಲ್ದಾಣದ ಸುತ್ತಮುತ್ತಲ 15 ಕಿ.ಮೀ ವ್ಯಾಪ್ತಿಯಲ್ಲಿ ಕಟ್ಟಡಗಳ ಎತ್ತರದ ಮಿತಿಯನ್ನು 150 ಮೀ. ನಿಗದಿಪಡಿಸಲಾಗಿದೆ ಎಂದು ಜಿ.ಎಸ್.ಆರ್ 751 (ಇ) ನಿಯಮದಲ್ಲಿ ಸೂಚಿಸಲಾಗಿದೆ. ಆದರೆ ರಕ್ಷಣಾ ಇಲಾಖೆ ವಿಮಾನ ನಿಲ್ದಾಣಗಳು ಈ ವಿಪರೀತ ನಿರ್ಬಂಧ ಹೇರುವುದರ ಜತೆಗೆ 150 ಮೀ. ಎತ್ತರದ ಮಿತಿಯನ್ನು 15 ಕಿ.ಮೀ ಮೀರಿ 20 ಕಿ.ಮೀ ವರೆಗೂ ವಿಸ್ತರಿಸಿವೆ. ಈ ನಿರ್ಬಂಧಗಳು ಈ ಬೆಂಗಳೂರು ನಗರದ ಪ್ರಗತಿಗೆ ಮಾರಕವಾಗಿವೆ ಎಂದು ಡಿ ಕೆ ಶಿವಕುಮಾರ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
For More Updates Join our WhatsApp Group :




