ದೇವನಹಳ್ಳಿ | ಭೂ ಅಕ್ರಮದ ಆಘಾತಕಾರಿ ಪ್ರಕರಣ
ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಕೋಟ್ಯಂತರ ಮೌಲ್ಯದ ಜಮೀನನ್ನು ಕಬಳಿಸಲು ಭೂಗಳ್ಳರು ಯತ್ನಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.
ಹೆಚ್ಎಎಲ್ ನಿವೃತ್ತ ಉದ್ಯೋಗಿ ರಘುರಾಮಯ್ಯ ಅವರಿಗೆ ಸೇರಿದ 40 ಎಕರೆ ಜಮೀನನ್ನು ಕಬಳಿಸಲು 1995ರಲ್ಲಿ ಅವರು ಮೃತಪಟ್ಟಿದ್ದಾರೆ ಎಂಬ ನಕಲಿ ಮರಣ ಪತ್ರ ಸೃಷ್ಟಿಸಿರುವ ಆರೋಪ ಕೇಳಿಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಯರ್ರಮುದ್ದನಹಳ್ಳಿಯ ಕೆಂಪುಮಣ್ಣಿನ ಫಲವತ್ತಾದ ಜಮೀನು ಈ ವಿವಾದದ ಕೇಂದ್ರವಾಗಿದೆ. ಈ ಭೂಮಿಯ ಮೇಲೆ ಹಲವು ಭೂಗಳ್ಳರು ಕಣ್ಣು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಮ್ಯುಟೇಷನ್ ರದ್ದು ವಿಚಾರದಲ್ಲಿ ಅಧಿಕಾರಿಗಳು 40 ಲಕ್ಷ ರೂ ಲಂಚ ಕೇಳುತ್ತಿದ್ದಾರೆ ಎಂದು ರಘುರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಸಮರ್ಪಕ ಸ್ಪಷ್ಟನೆ ನೀಡದೆ ಅಲೆದಾಡಿಸುತ್ತಿದ್ದಾರೆ ಎಂದೂ ಹೇಳಿದ್ದಾರೆ.
ರಾತ್ರಿಯ ವೇಳೆ ಜಮೀನಿನ ಬಳಿ ಬಂದು ಬೆದರಿಕೆ ಹಾಕಲಾಗುತ್ತಿದೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ. ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.
For More Updates Join our WhatsApp Group :




