ಕಬ್ಬನ್ ಪಾರ್ಕ್ ನಿಲ್ದಾಣ ತಾತ್ಕಾಲಿಕ ಬಂದ್.!
ಬೆಂಗಳೂರು : ನಮ್ಮ ಮೆಟ್ರೋದ ಪ್ರಮುಖ ನಿಲ್ದಾಣವನ್ನು ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಾಸದ ಕಾರಣಕ್ಕೆ ಮುಚ್ಚಲಾಗಿದೆ. ಈ ಸಂಬಂಧ ನಮ್ಮ ಮೆಟ್ರೋ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಆದರೆ, ನಮ್ಮ ಮೆಟ್ರೋ ಹಂಚಿಕೊಂಡಿರುವ ಮಾಹಿತಿಯು ಭಾರೀ ಟ್ರೋಲ್ ಹಾಗೂ ಟೀಕೆಗೆ ಗುರಿಯಾಗಿದೆ.
ನಿಖರವಾದ ಮಾಹಿತಿಯನ್ನು ನೀಡದೆ ಇರುವುದು ಹಾಗೂ ಸರಿಯಾದ ಕನ್ನಡವನ್ನು ಬಳಕೆ ಮಾಡದೆ ಇರುವ ಕಾರಣಕ್ಕೆ ನಮ್ಮ ಮೆಟ್ರೋದ ವಿರುದ್ಧ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ನಮ್ಮ ಮೆಟ್ರೋ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಮಾಹಿತಿ ಏನು ಇದಕ್ಕೆ ಕನ್ನಡಿಗರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರು ನಗರದ ಪ್ರಮುಖ ಸಂಚಾರ ಸಾರಿಗೆ ಮೆಟ್ರೋದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಭಾರೀ ವ್ಯತ್ಯಾಸವಾಗಿದೆ. ಬೆಂಗಳೂರಿನಲ್ಲಿ ಸೋಮವಾರ ಬೆಳಿಗ್ಗೆ ಸಾಧಾರಣ ಮಳೆಯಾಗಿತ್ತು. ಮಳೆಯ ಕಾರಣಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಿರುವ ಸಾಧ್ಯತೆ ಇದೆ. ಆದರೆ ನಮ್ಮ ಮೆಟ್ರೋದಿಂದ ಸರಿಯಾದ ಮಾಹಿತಿ ಹಂಚಿಕೊಳ್ಳದೆ ಇರುವುದು ಹಾಗೂ ಮೆಟ್ರೋ ಪ್ರಮುಖ ನಿಲ್ದಾಣವನ್ನು ಮುಚ್ಚಿರುವುದು ಮತ್ತು ಮುಖ್ಯವಾಗಿ ಸರಿಯಾಗಿ ಕನ್ನಡದಲ್ಲಿ ಮಾಹಿತಿ ಹಂಚಿಕೊಳ್ಳದೆ ಇರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಸೋಶಿಯಲ್ ಮೀಡಿಯಾ ಎಕ್ಸ್ನಲ್ಲಿ ನಮ್ಮ ಮೆಟ್ರೋ ಟ್ವೀಟ್
“ವಿದ್ಯುತ್ ವ್ಯತ್ಯಯದ ಕಾರಣ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ನಿಲ್ದಾಣದಲ್ಲಿ ರೈಲುಗಳು ನಿಲ್ಲುವುದಿಲ್ಲ. ವಿದ್ಯುತ್ ಪೂರೈಕೆ ನಂತರ ಸಾಮಾನ್ಯ ನಿಲುಗಡೆ ಮರುಾರಂಭವಾಗುತ್ತದೆ (ಪುನರಾರಂಭವಾಗುತ್ತದೆ). ಪ್ರಯಾಣಿಕರು ತಮ್ಮ ಪ್ರಯಾಣವನ್ನು ತಕ್ಕಂತೆ ಯೋಜಿಸಿಕೊಳ್ಳುವಂತೆ ವಿನಂತಿಸಲಾಗಿದೆ. ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ.” ಎಂದು ಸಂದೇಶ ಹಂಚಿಕೊಳ್ಳಲಾಗಿದೆ.
For More Updates Join our WhatsApp Group :




