ಯಡಿಯೂರಪ್ಪ ರಾಜಕೀಯ ಪಯಣದ ಸಾಕ್ಷಿ: ಚಿತ್ರದುರ್ಗದಲ್ಲಿ ಹಳೆಯ ಕಾರಿನ ಪ್ರದರ್ಶನ.!
ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಾಳೆ ನಡೆಯಲಿರುವ ಬಿಎಸ್ವೈ ಅಭಿಮಾನೋತ್ಸವದ ಅಂಗವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಳಸುತ್ತಿದ್ದ ಐತಿಹಾಸಿಕ ಅಂಬಾಸಿಡರ್ ಕಾರನ್ನು ವಿಶೇಷ ಪ್ರದರ್ಶನಕ್ಕೆ ಇಡಲಾಗಿದೆ. ಈ ಕಾರು ಬಿಜೆಪಿ ಕಾರ್ಯಕರ್ತರು ಮತ್ತು ಯಡಿಯೂರಪ್ಪ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಹಲವರು ಕಾರಿನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.
ರಾಜಕೀಯ ಜೀವನದ ಆರಂಭಿಕ ದಿನಗಳಲ್ಲಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಳ್ಳಲು ಬಳಸುತ್ತಿದ್ದ ಈ ಅಂಬಾಸಿಡರ್ ಕಾರು, ಬಿಜೆಪಿ ಪಕ್ಷದ ಬೆಳವಣಿಗೆಯ ಸಂಕೇತವಾಗಿಯೂ ಪರಿಗಣಿಸಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿಯೂ ಪಕ್ಷದ ಸಂಘಟನೆ ಬಲಪಡಿಸಲು ಈ ಕಾರು ಮಹತ್ವದ ಪಾತ್ರ ವಹಿಸಿದೆ ಎಂಬ ನೆನಪುಗಳನ್ನು ಬಿಜೆಪಿ ನಾಯಕರು ಹಂಚಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, “ಯಡಿಯೂರಪ್ಪರನ್ನು ಗುರುತಿಸುವಷ್ಟೇ ಈ ಕಾರನ್ನೂ ಜನ ಗುರುತಿಸುತ್ತಾರೆ. ಅಂದು ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿ ಹಳ್ಳಿಗಳಿಗೆ ತಲುಪಿಸಲು ಈ ಕಾರು ಸಹಕಾರಿಯಾಯಿತು. ಪಕ್ಷದ ಅನೇಕ ಪ್ರಮುಖ ನಾಯಕರು ಇದೇ ಕಾರಿನಲ್ಲಿ ಸಂಚರಿಸಿ ಪ್ರಚಾರ ನಡೆಸಿದ್ದರು” ಎಂದು ಹೇಳಿದರು.
ಬಿಎಸ್ವೈ ಅಭಿಮಾನೋತ್ಸವದ ಅಂಗವಾಗಿ ಪ್ರದರ್ಶನಕ್ಕಿಡಲಾದ ಈ ಕಾರು, ಯಡಿಯೂರಪ್ಪ ಅವರ ರಾಜಕೀಯ ಹೋರಾಟ ಮತ್ತು ಜನಸಂಪರ್ಕದ ನೆನಪುಗಳನ್ನು ಮತ್ತೊಮ್ಮೆ ಜೀವಂತಗೊಳಿಸಿದೆ.
For More Updates Join our WhatsApp Group :




