ಬೆಂಗಳೂರು ಮೆಟ್ರೋ ಪ್ರಯಾಣಿಕರೇ ಗಮನಿಸಿ: ನೇರಳೆ ಮಾರ್ಗದಲ್ಲಿ 2 ಗಂಟೆ ಸೇವೆ ಸ್ಥಗಿತ
ಬೆಂಗಳೂರು : ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಇಲ್ಲಿದೆ. ಅಗತ್ಯ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಮೇ 10ರ ಭಾನುವಾರ ನಮ್ಮ ಮೆಟ್ರೋ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಪ್ರಕಟಣೆ ಮೂಲಕ ತಿಳಿಸಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಬಿಎಂಆರ್‌ಸಿಎಲ್ ಮಾಹಿತಿ ಪ್ರಕಾರ, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್) ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣ (ಸೆಂಟ್ರಲ್ ಕಾಲೇಜು) ನಡುವಿನ ನೇರಳೆ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಪರಿಣಾಮವಾಗಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ – ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ನಡುವಿನ ರೈಲು ಸಂಚಾರ ಬೆಳಿಗ್ಗೆ 7ರಿಂದ 9 ಗಂಟೆಯವರೆಗೆ ಎರಡು ಗಂಟೆಗಳ ಕಾಲ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಆದರೆ ಈ ಅವಧಿಯಲ್ಲೂ ಕೆಲವು ಮಾರ್ಗಗಳಲ್ಲಿ ಮೆಟ್ರೋ ಸೇವೆ ನಿಯಮಿತವಾಗಿ ಲಭ್ಯವಾಗಲಿದೆ. ಚಲ್ಲಘಟ್ಟ–ವಿಜಯನಗರ, ಎಂ.ಜಿ ರಸ್ತೆ–ವೈಟ್ಫೀಲ್ಡ್ (ಕಾಡುಗೋಡಿ), ಮಾದಾವರ–ಸಿಲ್ಕ್ ಇನ್‌ಸ್ಟಿಟ್ಯೂಟ್ ಹಾಗೂ ಆರ್.ವಿ ರಸ್ತೆ–ಬೊಮ್ಮಸಂದ್ರ ಮಾರ್ಗಗಳಲ್ಲಿ ರೈಲುಗಳು ಎಂದಿನಂತೆ ಸಂಚರಿಸಲಿವೆ.
ಬೆಳಿಗ್ಗೆ 9 ಗಂಟೆಯ ಬಳಿಕ ಸಂಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ಪುನರಾರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ. ವಾರಾಂತ್ಯದ ಪ್ರಯಾಣಕ್ಕೆ ಹೊರಡುವವರು ಈ ತಾತ್ಕಾಲಿಕ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು ಪರ್ಯಾಯ ಪ್ರಯಾಣ ವ್ಯವಸ್ಥೆ ಮಾಡಿಕೊಂಡರೆ ಉತ್ತಮ.
For More Updates Join our WhatsApp Group :




