ಬೆಂಗಳೂರಿನಲ್ಲಿ ಮಹಿಳಾ ಸುರಕ್ಷತೆ ಪ್ರಶ್ನಾರ್ಥಕ: NCRB ವರದಿಯಲ್ಲಿ ಆತಂಕಕಾರಿ ಅಂಕಿ-ಅಂಶ.!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ತಾಂತ್ರಿಕವಾಗಿ ಎಷ್ಟು ಮುಂದುವರಿಯುತ್ತಿದೆಯೋ, ಮಹಿಳೆಯರ ವಿರುದ್ಧದ ಅಪರಾಧಗಳ ವಿಷಯದಲ್ಲಿ ಅಷ್ಟೇ ಆತಂಕಕಾರಿ ವರದಿಗಳನ್ನು ಪಡೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ 2024ರ ವರದಿಯ ಪ್ರಕಾರ, ದೇಶದ 19 ಪ್ರಮುಖ ಮೆಟ್ರೋಪಾಲಿಟನ್ ನಗರಗಳ ಪೈಕಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಬೆಂಗಳೂರು 3ನೇ ಸ್ಥಾನ ಪಡೆದಿದೆ.
ಸಂಖ್ಯೆಯಲ್ಲಿ ಅಲ್ಪ ಇಳಿಕೆ, ದೌರ್ಜನ್ಯದಲ್ಲಿ ಏರಿಕೆ!
ವರದಿಯ ಪ್ರಕಾರ, ದೆಹಲಿ ಮತ್ತು ಮುಂಬೈ ಮೊದಲ ಎರಡು ಸ್ಥಾನಗಳಲ್ಲಿದ್ದರೆ, ಬೆಂಗಳೂರು ನಂತರದ ಸ್ಥಾನದಲ್ಲಿದೆ. 2024ರಲ್ಲಿ ಬೆಂಗಳೂರಿನಲ್ಲಿ ಒಟ್ಟು 4,748 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದ್ದರೂ, ಅಪರಾಧಗಳ ತೀವ್ರತೆ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ವಿಶೇಷವಾಗಿ ಮಹಿಳೆಯರ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಗಳಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂಬುದು ಕಳವಳಕಾರಿ ಸಂಗತಿ.

ಅಪರಾಧಗಳ ಅಂಕಿ-ಅಂಶ ಹೀಗಿದೆ
ಅತ್ಯಾಚಾರ ಪ್ರಕರಣದಲ್ಲಿ 2023ರಲ್ಲಿ 169 ಪ್ರಕರಣಗಳಿದ್ದರೆ, 2024ರಲ್ಲಿ 168 ಪ್ರಕರಣಗಳು ವರದಿಯಾಗಿವೆ. ವರದಕ್ಷಿಣೆ ಸಾವಿನ ಪಟ್ಟಿಯಲ್ಲಿ ಜೈಪುರದೊಂದಿಗೆ ಬೆಂಗಳೂರು ದೇಶದಲ್ಲಿ 4ನೇ ಸ್ಥಾನದಲ್ಲಿದೆ. ಮಹಿಳೆಯರ ಮೇಲೆ ನಡೆಯುವ ಕ್ರಿಮಿನಲ್ ದೌರ್ಜನ್ಯ ಪ್ರಕರಣಗಳಲ್ಲಿ ಬೆಂಗಳೂರು 3ನೇ ಸ್ಥಾನದಲ್ಲಿದೆ. ಲೈಂಗಿಕ ಕಿರುಕುಳದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 30 ಪ್ರಕರಣಗಳು ಕಡಿಮೆಯಾಗಿದ್ದು, ಒಟ್ಟು 180 ಪ್ರಕರಣಗಳು ದಾಖಲಾಗಿವೆ.
For More Updates Join our WhatsApp Group :




