ಪ್ರಿಯಕರ ಜೊತೆ ಸೇರಿ ಪತಿಯ ಮನೆಯಿಂದ ಚಿನ್ನಾಭರಣ ದೋಚಿದ ಮಹಿಳೆ ಜೈಲು.!
ಬೆಳಗಾವಿ : ಜಿಲ್ಲೆಯಲ್ಲಿ ಸಿನಿಮಾ ಕಥೆಯನ್ನು ನೆನಪಿಸುವಂತಹ ಘಟನೆ ಬೆಳಕಿಗೆ ಬಂದಿದೆ. ಮದುವೆಯಾದ ಕೆಲವೇ ತಿಂಗಳಲ್ಲಿ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ ಮಹಿಳೆಯೊಬ್ಬಳನ್ನು ಕಟಕೋಳ ಪೊಲೀಸರು ಬಂಧಿಸಿದ್ದಾರೆ. ರಾಮದುರ್ಗ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ನಡೆದ ಈ ಪ್ರಕರಣ ಸ್ಥಳೀಯರಲ್ಲಿ ಆತಂಕ ಮತ್ತು ಅಚ್ಚರಿಯನ್ನು ಮೂಡಿಸಿದೆ.
ಮೂಲತಃ ಮೂಡಲಗಿ ತಾಲೂಕಿನ ಹಸೀನಾ ನದಾಫ್ ಎಂಬ ಮಹಿಳೆಗೆ ಎರಡು ತಿಂಗಳ ಹಿಂದಷ್ಟೇ ಹೊಸಕೋಟೆ ಗ್ರಾಮದ ಶರೀಫ್ ಎಂಬವರ ಜೊತೆ ವಿವಾಹವಾಗಿತ್ತು. ಆದರೆ ಮದುವೆಗೆ ಮುಂಚೆಯೇ ಹಣಮಂತ ಮಾರಾಪೂರ ಎಂಬಾತನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಹಸೀನಾ, ಮದುವೆಯ ಬಳಿಕವೂ ಆ ಸಂಬಂಧ ಮುಂದುವರಿಸಿದ್ದಳು ಎಂದು ತಿಳಿದುಬಂದಿದೆ.
ಪ್ರಿಯಕರನೊಂದಿಗೆ ಶಾಶ್ವತವಾಗಿ ಜೀವನ ನಡೆಸಲು ಹಣದ ಅಗತ್ಯ ಎದುರಾದ ಹಿನ್ನೆಲೆಯಲ್ಲಿ, ಹಸೀನಾ ತನ್ನ ಪತಿಯ ಮನೆಯಲ್ಲಿ ಸಂಗ್ರಹಿಸಿದ್ದ ಚಿನ್ನಾಭರಣಗಳ ಮೇಲೆ ಕಣ್ಣು ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವಕಾಶವನ್ನು ಬಳಸಿಕೊಂಡು, ಸುಮಾರು 21 ಲಕ್ಷ ರೂಪಾಯಿ ಮೌಲ್ಯದ 154 ಗ್ರಾಂ ಚಿನ್ನಾಭರಣ ಹಾಗೂ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ದೋಚಿಕೊಂಡು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.

ಘಟನೆ ಕುರಿತು ಶರೀಫ್ ಅವರ ಸಂಬಂಧಿ ದಿಲ್ಶಾನ್ ನದಾಫ್ ಅವರು ಕಟಕೋಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತ್ವರಿತ ತನಿಖೆ ನಡೆಸಿ ಕೇವಲ 48 ಗಂಟೆಗಳ ಒಳಗಾಗಿ ಹಸೀನಾ ಮತ್ತು ಆಕೆಯ ಪ್ರಿಯಕರ ಹಣಮಂತ ಮಾರಾಪೂರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಕಳವು ಮಾಡಲಾಗಿದ್ದ ಬಹುತೇಕ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
For More Updates Join our WhatsApp Group :




