ಬೆಂಗಳೂರು: ಪತಿ ಮೇಲಿನ ಸಿಟ್ಟಿಗೆ ಹೆತ್ತ ಮಗನನ್ನು ಸ್ನೇಹಿತನ ಜತೆಗೂಡಿ ತಾಯಿಯೇ ಕಿಡ್ನ್ಯಾಪ್ ಮಾಡಿರುವ ಘಟನೆ ಬೆಂಗಳೂರು ನಗರದ ಕೆ.ಆರ್. ಪುರಂನಲ್ಲಿ ನಡೆದಿದೆ. ಕೆಆರ್ ಪುರಂನ ಕ್ಯಾಸ ಗ್ರ್ಯಾಂಡ್ ರಾಯ್ಸಿ ಅಪಾರ್ಟ್ಮೆಂಟ್ನ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಅಪಹರಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಂದು (ಆಗಸ್ಟ್ 02) ಬೆಳಿಗ್ಗೆ ಸಿದ್ಧಾರ್ಥ್ ತಂದೆ ಮಗುವನ್ನು ಶಾಲೆಗೆ ಬಿಡಲು ಅಪಾರ್ಟ್ಮೆಂಟ್ ಮುಂಭಾಗ ನಿಂತಿದ್ದರು. ಈ ವೇಳೆ ತನ್ನ ಸ್ನೇಹಿತನೊಂದಿಗೆ ಬಂದ ತಾಯಿ ಅನುಪಮ ಸಿದ್ಧಾರ್ಥ್ರಿಂದ ಮಗುವನ್ನು ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಮಗುವಿನ ತಾಯಿ ಅನುಪಮ ಮತ್ತು ಆತನ ಸ್ನೇಹಿತನ ವಿರುದ್ಧ ತಂದೆ ಸಿದ್ದಾರ್ಥ್ ಪೊಲೀಸರಿಗೆ ದೂರು ನೀಡಿದ್ದಾರೆ.
2014ರಲ್ಲಿ ಮದುವೆಯಾಗಿದ್ದ ಸಿದ್ದಾರ್ಥ್ ಹಾಗೂ ಅನುಪಮ ಆ ಬಳಿಕ ಕೌಟುಂಬಿಕ ಕಲಹದಿಂದ ವಿಚ್ಛೇದನ ಪಡೆದಿದ್ದರು. ಪತಿಯಿಂದ ದೂರಾದ ಬಳಿಕ ಅನುಪಮ ಬೇರೊಬ್ಬ ವ್ಯಕ್ತಿ ಜತೆಗೆ ಮದುವೆ ಆಗಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಮಗುವನ್ನು ಪತಿ ಸಿದ್ದಾರ್ಥ್ ವಶಕ್ಕೆ ಒಪ್ಪಿಸಿತ್ತು. ಆದರೆ, ಅನುಪಮ ಸ್ನೇಹಿತನ ಜತೆ ಸೇರಿ ಮಗುವನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮಗುವನ್ನು ಕಿಡ್ನ್ಯಾಪ್ ಮಾಡುವ ದೃಶ್ಯವು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.