ಸರ್ಕಾರದ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ; ‘ತುಷ್ಟೀಕರಣ ರಾಜಕಾರಣದಿಂದ ಕಾಂಗ್ರೆಸ್ ಕುಸಿತ’
ಬೆಂಗಳೂರು: ಪ್ರಲ್ಹಾದ್ ಜೋಶಿ ಅವರು ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ Siddaramaiah ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
“ನಿಮಗೆ ಕೇಸರಿ ಶಾಲು ನಿಷೇಧಿಸುವ ಅಧಿಕಾರವನ್ನು ಯಾರು ಕೊಟ್ಟಿದ್ದಾರೆ?” ಎಂದು ಪ್ರಶ್ನಿಸಿದ ಜೋಶಿ, ಸರ್ಕಾರ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. ದೇಶದಲ್ಲಿ ಈಗಲೂ ಶೇಕಡಾ 80ರಷ್ಟು ಹಿಂದೂಗಳಿದ್ದಾರೆ. ಓಲೈಕೆ ರಾಜಕಾರಣ ನಡೆಸಿದ ಪಕ್ಷಗಳ ಸ್ಥಿತಿ ದೇಶದ ಜನತೆಗೆ ಗೊತ್ತಿದೆ ಎಂದು ಅವರು ಹೇಳಿದರು.

ಹಿಜಾಬ್ ವಿಷಯವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ ಸರ್ಕಾರ ಹೊಸ ಆದೇಶ ಹೊರಡಿಸಿರುವುದು ಸರಿಯಲ್ಲ. ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಕೇಂದ್ರ ಸಚಿವರು ಆಗ್ರಹಿಸಿದರು. ಕಾಂಗ್ರೆಸ್ ಸರ್ಕಾರ ಧಾರ್ಮಿಕ ಭಾವನೆಗಳ ಆಧಾರದ ಮೇಲೆ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಟೀಕಿಸಿದರು.
ಇತ್ತೀಚೆಗೆ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರಕ್ಕೆ ಪೂರಕವಾಗಿ ಹಿಜಾಬ್, ಟರ್ಬನ್, ಜನಿವಾರ, ರುದ್ರಾಕ್ಷಿ ಮೊದಲಾದ ಸಾಂಪ್ರದಾಯಿಕ ಸಂಕೇತಗಳಿಗೆ ಅವಕಾಶ ನೀಡುವ ಹೊಸ ವಸ್ತ್ರಸಂಹಿತೆ ಜಾರಿಗೆ ತಂದಿದೆ. ಈ ನಿರ್ಧಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ.
ಪ್ರಲ್ಹಾದ್ ಜೋಶಿ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಗೆ ಗ್ರಾಸವಾಗಿದ್ದು, ಹಿಜಾಬ್ ವಿವಾದ ಮತ್ತೆ ರಾಜ್ಯ ರಾಜಕೀಯದ ಕೇಂದ್ರಬಿಂದುವಾಗುತ್ತಿದೆ.
For More Updates Join our WhatsApp Group :




