ವೇತನ ಪರಿಷ್ಕರಣೆ ವಿಚಾರಕ್ಕೆ ಭುಗಿಲೆದ್ದ ಸಾರಿಗೆ ನೌಕರರು; ಸರ್ಕಾರದ ವಿರುದ್ಧ ಕಿಡಿ
ಬೆಂಗಳೂರು: ವೇತನ ಪರಿಷ್ಕರಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಾರಿಗೆ ನೌಕರರು, ಮೇ 20ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.ಇದರಿಂದಾಗಿ ರಾಜ್ಯದ ಜನತೆಗೆ ಸಾರಿಗೆ ಸಂಕಷ್ಟ ಎದುರಾಗುವ ಮುನ್ಸೂಚನೆ ಸಿಕ್ಕಿದೆ.
ಸರ್ಕಾರದ ಆದೇಶಕ್ಕೆ ನೌಕರರ ಆಕ್ರೋಶ ಏಕೆ?
ಸಾರಿಗೆ ನಿಗಮಗಳ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಶೇ. 12.5ರಷ್ಟು ವೇತನ ಪರಿಷ್ಕರಣೆ ಮಾಡಿ ಸರ್ಕಾರ ನಿನ್ನೆ ಸಂಜೆ ಆದೇಶ ಹೊರಡಿಸಿತ್ತು. ಆದರೆ, ಸಾರಿಗೆ ಸಂಸ್ಥೆಗಳ ಜಂಟಿಕ್ರಿಯಾ ಸಮಿತಿಯು ಇದನ್ನು ಏಕಪಕ್ಷೀಯ ನಿರ್ಧಾರ ಎಂದು ಕರೆದಿದೆ. ಮೂಲ ವೇತನದೊಂದಿಗೆ ಶೇ. 25ರಷ್ಟು ವೇತನ ಹೆಚ್ಚಳ ಮಾಡಬೇಕು ಮತ್ತು ಇದನ್ನು 2024ರ ಜನವರಿ 1ರಿಂದಲೇ ಜಾರಿಗೆ ತರಬೇಕು ಎಂಬುದು ನೌಕರರ ಆಗ್ರಹ. ಆದರೆ ಸರ್ಕಾರ 2025ರ ಏಪ್ರಿಲ್ನಿಂದ ಅನ್ವಯವಾಗುವಂತೆ ಶೇ. 12.5ರಷ್ಟು ಮಾತ್ರ ಹೆಚ್ಚಿಸಿರುವುದು ನೌಕರರನ್ನು ಕೆರಳಿಸಿದೆ. 2020ರ ಅವಧಿಯ ಬಾಕಿ ಹಣ ಹಾಗೂ ಸುಮಾರು 1,272 ಕೋಟಿ ರೂ.ಗಳ ಬಾಕಿಯನ್ನು ಒಂದೇ ಕಂತಿನಲ್ಲಿ ಪಾವತಿಸಬೇಕೆಂದು ನೌಕರರು ಒತ್ತಾಯಿಸಿದ್ದಾರೆ.

ಕೆಲಸ ಸ್ಥಗಿತ, ಹೋರಾಟ ನಿಶ್ಚಿತ
ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷೆ ಜ್ಯೋತಿ ಅನಂತ ಸುಬ್ಬರಾವ್ ಮಾತನಾಡಿ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ವೇತನ ಹೆಚ್ಚಿಸಬೇಕೆಂಬ ನಿಯಮವನ್ನು ಸರ್ಕಾರ ಉಲ್ಲಂಘಿಸುತ್ತಿದೆ. ಎರಡೂವರೆ ವರ್ಷಗಳಿಂದ ಮಾತುಕತೆ ನಡೆಸಿದರೂ ನಮ್ಮ ಪ್ರಮುಖ ಬೇಡಿಕೆಗಳನ್ನು ಕಡೆಗಣಿಸಲಾಗಿದೆ. ಹೀಗಾಗಿ ಮೇ 20ರಿಂದ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಲಿದ್ದಾರೆ, ಎಂದು ತಿಳಿಸಿದ್ದಾರೆ.
ಸರ್ಕಾರಕ್ಕೆ ಎಚ್ಚರಿಕೆ
ಮುಷ್ಕರ ಹತ್ತಿಕ್ಕಲು ಸರ್ಕಾರ ಎಸ್ಮಾ (ESMA) ಕಾಯ್ದೆ ಜಾರಿ ಮಾಡಿದರೆ ಅಥವಾ ದೋಷಾರೋಪಣಾ ಪಟ್ಟಿ ಸಲ್ಲಿಸಿ ಬೆದರಿಸಲು ಮುಂದಾದರೆ ನಾವು ಜಗ್ಗುವುದಿಲ್ಲ ಎಂದು ಸಮಿತಿ ಎಚ್ಚರಿಸಿದೆ. ತುಮಕೂರಿನಲ್ಲಿ ಸರ್ಕಾರ ಹಮ್ಮಿಕೊಂಡಿರುವ ಸಾಧನ ಸಮಾವೇಶದ ದಿನವೇ ನೌಕರರು ಈ ಪ್ರತಿಭಟನೆಗೆ ಮುಂದಾಗಿರುವುದು ಸರ್ಕಾರದ ಮೇಲೆ ಒತ್ತಡ ತಂದಿದೆ.
For More Updates Join our WhatsApp Group :




