100ನೇ ಜನ್ಮದಿನದ ಸಂಭ್ರಮದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್‌

100ನೇ ಜನ್ಮದಿನದ ಸಂಭ್ರಮದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್

ಬೆಂಗಳೂರು: ಅಮೆರಿಕದ 39 ನೇ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್ ಅವರು ಅಕ್ಟೋಬರ್ 1 ರಂದು ತಮ್ಮ 100 ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ಮೂಲಕ 100 ವರ್ಷ ಬದುಕಿರುವ ಅಮೆರಿಕದ ಏಕೈಕ ಅಧ್ಯಕ್ಷ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ.

100ನೇ ಜನ್ಮದಿನದ ಹಿನ್ನೆಲೆಯಲ್ಲಿ ಕಾರ್ಟರ್ ಅವರ ತವರೂರಾದ ಜಾರ್ಜಿಯಾದ ಪ್ಲೇನ್ಸ್‌ನಲ್ಲಿ ಸಂಭ್ರಮ ಮನೆ ಮಾಡಿತ್ತು.

ಜಿಮ್ಮಿ ಅವರ ಕುಟುಂಬದವರು, ಸ್ನೇಹಿತರು, ಅಭಿಮಾನಿಗಳು ಈ ವೇಳೆ ಹಾಜರಿದ್ದು ಶುಭ ಕೋರಿದರು. ಜಾರ್ಜಿಯಾದ ಹಲವೆಡೆ ಅವರ ಜನ್ಮದಿನದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಪ್ಲೇನ್ಸ್‌ನ ತಮ್ಮ ವಿಶಾಲವಾದ ಮನೆಯ ಎದುರುಗಡೆಯ ಹುಲ್ಲುಸಾಸಿನಲ್ಲಿ ವ್ಹೀಲ್ ಚೇರ್‌ನಲ್ಲಿ ಬಂದು ತಮ್ಮ ಅಭಿಮಾನಿಗಳಿಗೆ ಕಾರ್ಟರ್ ಕೈ ಬೀಸಿದರು. ಕಳೆದ 17 ತಿಂಗಳಿನಿಂದ ಅವರು ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡಿಲ್ಲ. ಮನೆಯಲ್ಲಿಯೇ ಆರೈಕೆಯಲ್ಲಿದ್ದು ಆರೋಗ್ಯವಾಗಿದ್ದಾರೆ.

ಜಗತ್ತಿನ ಶ್ರೇಷ್ಠ ರಾಜಕಾರಣಿ ಎಂದು ಹೆಸರು ಪಡೆದಿರುವ ಜಿಮ್ಮಿ ಕಾರ್ಟರ್ ಅವರಿಗೆ ಅನೇಕ ಜಾಗತಿಕ ನಾಯಕರು ಶುಭ ಕೋರಿದ್ದಾರೆ.

ಅಕ್ಟೋಬರ್ 1 1924 ರಂದು ಜಾರ್ಜಿಯಾದ ಪ್ಲೇನ್ಸ್‌ನಲ್ಲಿ ಜನಿಸಿದ ಜಿಮ್ಮಿ ಮೂಲತಃ ರೈತ ಕುಟುಂಬದವರು.

ಡೆಮಾಕ್ರಟಿಕ್ ಪಾರ್ಟಿಯ ಮೂಲಕ ರಾಜಕೀಯ ಜೀವನ ಆರಂಭಿಸಿದ ಅವರು 1977ರಿಂದ 1981ರ ಅವಧಿಯಲ್ಲಿ ಅಮೆರಿಕದ 39ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 1971ರಿಂದ 1975ರ ಅವಧಿಯಲ್ಲಿ ಜಾರ್ಜಿಯಾದ ಗವರ್ನರ್ ಆಗಿಯೂ ಕೆಲಸ ಮಾಡಿದ್ದರು.

ಚೀನಾದೊಂದಿಗೆ ಅಮೆರಿಕದ ರಾಜತಾಂತ್ರಿಕ ಸಂಬಂಧಗಳು ಸುಧಾರಿಸಲು ಜಿಮ್ಮಿ ಸಾಕಷ್ಟು ಶ್ರಮಿಸಿದ್ದರು.

ಮುಂಬರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಿಮ್ಮಿ ಕಾರ್ಟರ್ ಅವರು ಮತ ಚಲಾಯಿಸಲು ಉತ್ಸುಕರಾಗಿದ್ದಾರೆ ಎಂದು ಅವರ ಮೊಮ್ಮಗ ಜೋಶ್ ಕಾರ್ಟರ್ ಹೇಳಿದ್ದಾರೆ.

Leave a Reply

Your email address will not be published. Required fields are marked *