ಮಹಿಳೆಯರ ವಿಡಿಯೋ, ಫೋಟೋಗಳು ಮೊಬೈಲ್ನಲ್ಲಿ ಪತ್ತೆ – ಪೊಲೀಸರಿಂದ ತನಿಖೆ
ಬೆಂಗಳೂರು: ಹನಿಯೂರು ಚಂದ್ರೇಗೌಡ. ರಾಮನಗರ ಜಿಲ್ಲಾ ಮಕ್ಕಳ ಆಯೋಗದ ಸಮಿತಿ ಸದಸ್ಯ. ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿದ್ದ ಈತ, ಒಳಗೊಳಗೆ ಮಾಡ್ತಿದ್ದ ಕೆಲಸ ಮಾತ್ರ ಅತೀ ಹೀನಾಯವಾಗಿತ್ತು. ಮದುವೆಯಾಗುವುದಾಗಿ ನಂಬಿಸಿ, ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಈ ಕಿರಾತಕ, ಈಗ ಆರ್.ಆರ್.ನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಈ ಚಂದ್ರೇಗೌಡ ಬೆಂಗಳೂರಿನ ಸುಬ್ರಹ್ಮಣ್ಯಪುರ ನಿವಾಸಿ. ಈತ ಬರೀ ಲೈಂಗಿಕ ದೌರ್ಜನ್ಯ ಅಷ್ಟೇ ಅಲ್ಲದೆ,ತಾನೊಬ್ಬ ಪೊಲೀಸ್ ಅಧಿಕಾರಿ, ಪ್ರಭಾವಿ ವಕೀಲ ಅಥವಾ ಮಾಧ್ಯಮ ಪ್ರತಿನಿಧಿ ಅಂತಾ ಸುಳ್ಳು ಹೇಳಿ ನಕಲಿ ಐಡಿ ಕಾರ್ಡ್‌ಗಳನ್ನು ಸೃಷ್ಟಿಸಿಕೊಂಡಿದ್ದ. ಈ ಮುಖವಾಡಗಳನ್ನೇ ಬಂಡವಾಳ ಮಾಡಿಕೊಂಡು ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದ. ಇತ್ತೀಚೆಗೆ ಪತಿಯಿಂದ ದೂರವಾಗಿದ್ದ ಮಹಿಳೆಯೊಬ್ಬರಿಗೆ ತಾನು ಉಪನ್ಯಾಸಕ ಎಂದು ಪರಿಚಯ ಮಾಡಿಕೊಂಡು, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದ.
ಮಹಿಳೆಯ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಹನಿ ಟ್ರ್ಯಾಪ್ ಪ್ರಕರಣದಡಿ ಚಂದ್ರೇಗೌಡನನ್ನು ಬಂಧಿಸಿದ್ದಾರೆ.ಆರೋಪಿಯ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿದ್ದು, ಅದರಲ್ಲಿರುವ ಸಾಕ್ಷ್ಯಗಳು ಕಂಡು ಪೊಲೀಸರೇ ದಂಗಾಗಿದ್ದಾರೆ. ಈತ ಸಿನಿಮಾ ಒಂದರಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದನಂತೆ. ಅದೇ ಫೋಟೋ ಇಟ್ಕೊಂಡು ಮಹಿಳೆಯರಿಗೆ ತಾನೊಬ್ಬ ಪೊಲೀಸ್ ಅಂತಾ ನಂಬಿಸಿ ಮೋಸ ಮಾಡಿದ್ದಾನೆ. ಸದ್ಯ ಈತನಿಂದ ಇನ್ಯಾರಾದರೂ ವಂಚನೆಗೆ ಒಳಗಾಗಿದ್ದಾರಾ ಅನ್ನೋ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.ಒಟ್ಟಿನಲ್ಲಿ ಮಕ್ಕಳ ರಕ್ಷಣೆ ಮಾಡಬೇಕಾದವರೇ ಮಹಿಳೆಯರ ಶೋಷಣೆಗೆ ಇಳಿದಿರೋದು ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ.
For More Updates Join our WhatsApp Group :




