ಮಳೆ ಆರ್ಭಟಕ್ಕೆ ಅನಾಹುತ: ಆಟವಾಡುತ್ತಿದ್ದ ಮಕ್ಕಳ ಮೇಲೆ ಗೋಡೆ ಬಿದ್ದು ಬಾಲಕಿ ಮೃತ್ಯು.!
ಯಾದಗಿರಿ : ಜಿಲ್ಲೆಯ ವಡಗೇರಾ ತಾಲೂಕಿನ ಗ್ರಾಮದಲ್ಲಿ ದುರ್ಘಟನೆಯೊಂದು ಸಂಭವಿಸಿದ್ದು, ಮನೆಯ ಗೋಡೆ ಕುಸಿದು 8 ವರ್ಷದ ಬಾಲಕಿ ಸಾ*ನ್ನಪ್ಪಿದ್ದಾಳೆ. ಮೃತ ಬಾಲಕಿಯನ್ನು ಅಕ್ಷತಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನಿಬ್ಬರು ಮಕ್ಕಳು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿದ್ದಪ್ಪ ಎಂಬುವರ ಮನೆ ಅಡುಗೆ ಕೋಣೆಯಲ್ಲಿ ಮಕ್ಕಳು ಆಟವಾಡುತ್ತಿದ್ದ ವೇಳೆ ಏಕಾಏಕಿ ಗೋಡೆ ಕುಸಿದಿದೆ. ಅವಶೇಷಗಳಡಿ ಸಿಲುಕಿದ್ದ ಮಕ್ಕಳನ್ನು ಸ್ಥಳೀಯರು ಹಾಗೂ ಕುಟುಂಬಸ್ಥರು ರಕ್ಷಣೆ ಮಾಡಿದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅಕ್ಷತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಾಯಾಳುಗಳಾದ ಸಂಗೀತಾ ಮತ್ತು ಭೂಮಿಕಾಳಿಗೆ ಯಾದಗಿರಿಯ ಯೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಅಡುಗೆ ಕೋಣೆಯ ಗೋಡೆ ನೀರಿನಿಂದ ದುರ್ಬಲಗೊಂಡಿತ್ತು. ಗಾಳಿಯ ತೀವ್ರತೆಗೆ ತಗಡಿನ ಮೇಲ್ಛಾವಣಿಯೂ ಹಾನಿಗೊಳಗಾಗಿತ್ತು. ಮುನ್ನೆಚ್ಚರಿಕೆಯಾಗಿ ಮನೆಯವರು ಅಡುಗೆ ಕೋಣೆಯನ್ನು ಬೇರೆಡೆಗೆ ಸ್ಥಳಾಂತರಿಸಿದ್ದರು. ಆದರೆ ಮಕ್ಕಳು ಅದೇ ಜಾಗದಲ್ಲಿ ಆಟವಾಡುತ್ತಿದ್ದಾಗ ಗೋಡೆ ಕುಸಿದು ಈ ದುರಂತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿ.ಪಂ. ಸಿಇಒ ಲವೀಶ್ ಒರಡಿಯಾ ಹಾಗೂ ಎಸ್‌ಪಿ ಪೃಥ್ವಿಕ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬದವರ ಆಕ್ರಂದನ ಗ್ರಾಮಸ್ಥರ ಮನ ಕಲುಕಿದೆ.
For More Updates Join our WhatsApp Group :




