ಬೆಂಗಳೂರು: ಆಗಸ್ಟ್ 20 ರ ವರೆಗೂ ಕರ್ನಾಟಕದ ಹಲವೆಡೆ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ. ಮುಂದಿನ ನಾಲ್ಕು ದಿನಗಳ ಕರ್ನಾಟಕ ಹವಾಮಾನ ಮುನ್ಸೂಚನೆ ಲಭ್ಯವಾಗಿದ್ದು, ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಆಗಸ್ಟ್ 17 ರಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆ
ಆಗಸ್ಟ್ 17 ರಂದು ಭಾನುವಾರ ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆಗಸ್ಟ್ 18ರಂದು ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ದಕ್ಷಿಣ ಕನ್ನಡ, ಹಾಸನ, ಮೈಸೂರು, ಕೊಡಗು, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಿಗೆ ಯೆಲ್ಲೋ ಅಲರ್ಟ್
ರಾಜಧಾನಿ ಬೆಂಗಳೂರಿಗೆ ಆಗಸ್ಟ್ 19 ರ ವರೆಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಗರದಲ್ಲಿ ಬಲವಾದ ಗಾಳಿ ಬೀಸುವಿಕೆ ಇರಲಿದ್ದು, ತುಂತುರು ಮಳೆಯಾಗುವ ಸಾಧ್ಯೆತೆಯೂ ಇದೆ.
ಮುಂದಿನ 7 ದಿನಗಳ ಕಾಲ ರಾಜ್ಯದಾದ್ಯಂತ ಜೋರಾದ ಗಾಳಿಯೊಂದಿಗೆ ಕೆಲವೆಡೆ ವ್ಯಾಪಕವಾಗಿ ಮತ್ತು ಇನ್ನು ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಆಗಸ್ಟ್ 18 ಮತ್ತು 19 ರಂದು ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ.
ಏತನ್ಮಧ್ಯೆ, ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ವಿವಿಧೆಡೆ ಶನಿವಾರ ಮಳೆಯ ಅಬ್ಬರ ಮುಂದುವರಿದಿದೆ. ಚಿಕ್ಕಮಗಳೂರಿನ ಕೊಪ್ಪದಲ್ಲಿ ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಚಿಕ್ಕಬಳ್ಳಾಪುರದಲ್ಲಿಯೂ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಟೊಮೆಟೋ ಬೆಳೆಗೆ ಹಾನಿಯಾಗಿದೆ.
ಬಾಗಲಕೋಟೆ ಹಾಗೂ ಗದಗ ಜಿಲ್ಲೆಯಲ್ಲೂ ಭಾರಿ ಮಳೆಯಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೇವಿನಾಳದಲ್ಲಿ ಮಲಪ್ರಭಾ ನದಿ ನೀರಿನ ರಭಸಕ್ಕೆ ಸೇತುವೆ ಪಕ್ಕದ ತಡೆಗೋಡೆ ಒಡೆದುಹೋಗಿ ಹೊಲ, ಗದ್ದೆಗಳಿಗೆ ನದಿ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
For More Updates Join our WhatsApp Group :




