ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಕೊರತೆ: ರೋಗಿಗಳ ಪರದಾಟಕ್ಕೆ ಜನರ ಆಕ್ರೋಶ.!

ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಕೊರತೆ: ರೋಗಿಗಳ ಪರದಾಟಕ್ಕೆ ಜನರ ಆಕ್ರೋಶ.!

ಎಕ್ಸ್ರೇ ಶೀಟ್ ಕೂಡ ಇಲ್ಲ!: ಗ್ಯಾರಂಟಿ ಯೋಜನೆಗಳ ನಡುವೆ ಆರೋಗ್ಯ ಸೇವೆ ಕುಸಿತ ಆರೋಪ.!

ದೇವನಹಳ್ಳಿ: Devanahalli ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಹಾಗೂ ಮೂಲಭೂತ ವೈದ್ಯಕೀಯ ಸೌಲಭ್ಯಗಳ ಕೊರತೆ ತೀವ್ರವಾಗಿದ್ದು, ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆಗೆ ಅಗತ್ಯ ಅನುದಾನ ಕಡಿಮೆಯಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಪ್ರತಿದಿನ ನೂರಾರು ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರೂ, ಸಾಮಾನ್ಯ ಜ್ವರ ಮತ್ತು ಗ್ಯಾಸ್ಟ್ರಿಕ್ ಮಾತ್ರೆಗಳನ್ನು ಹೊರತುಪಡಿಸಿ ಪ್ರಮುಖ ಆಂಟಿಬಯೋಟಿಕ್ ಔಷಧಗಳು ಲಭ್ಯವಿಲ್ಲ ಎಂದು ತಿಳಿದುಬಂದಿದೆ. ವೈದ್ಯರು ಬರೆದುಕೊಡುವ ಅನೇಕ ಔಷಧಿಗಳು ಆಸ್ಪತ್ರೆಯ ಫಾರ್ಮಸಿಯಲ್ಲಿ ಸಿಗದೆ, ರೋಗಿಗಳು ಹೊರಗಡೆ ಖರೀದಿಸಲು ಹೋಗುತ್ತಿದ್ದಾರೆ.. ಆಂಟಿಬಯೋಟಿಕ್ ಇಂಜೆಕ್ಷನ್‌ಗಳ ಕೊರತೆಯೂ ಆಸ್ಪತ್ರೆಯನ್ನು ಕಾಡುತ್ತಿದ್ದು, ಲಭ್ಯವಿರುವ ಸೀಮಿತ ಔಷಧಿಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

ಆಸ್ಪತ್ರೆಯ ಮತ್ತೊಂದು ಗಂಭೀರ ಸಮಸ್ಯೆ ಎಕ್ಸ್ರೇ ಶೀಟ್ ಕೊರತೆ. ಎಕ್ಸ್ರೇ ಮಾಡಿದ ಬಳಿಕ ರೋಗಿಗಳಿಗೆ ಫಿಲ್ಮ್ ಅಥವಾ ಗ್ರಾಫ್ ಶೀಟ್ ನೀಡಲಾಗುತ್ತಿಲ್ಲ. ಪರಿಣಾಮವಾಗಿ ರೋಗಿಗಳು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಎಕ್ಸ್ರೇ ಚಿತ್ರಗಳನ್ನು ಸೆರೆಹಿಡಿದು ಚಿಕಿತ್ಸೆಗಾಗಿ ತೆಗೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಆಸ್ಪತ್ರೆ ಸಿಬ್ಬಂದಿಯ ಪ್ರಕಾರ, ಅಗತ್ಯ ಔಷಧಗಳಿಗಾಗಿ ಹಲವು ದಿನಗಳ ಹಿಂದೆ ಇಂಡೆಂಟ್ ಸಲ್ಲಿಸಲಾಗಿದ್ದರೂ, ಸರಬರಾಜು ಇನ್ನೂ ಆಗಿಲ್ಲ. ಈ ಪರಿಸ್ಥಿತಿಯಿಂದ ಬಡ ಮತ್ತು ಮಧ್ಯಮ ವರ್ಗದ ರೋಗಿಗಳು ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ.

ಸ್ಥಳೀಯರು ಹಾಗೂ ರೋಗಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಗ್ಯ ಸೇವೆಗಳ ಸುಧಾರಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಮುಂದುವರಿದರೆ ಬಡಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕವೂ ವ್ಯಕ್ತವಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *