MUDA || ಸಿದ್ದರಾಮಯ್ಯನವರ ವರ್ಚಸ್ಸು ಕುಗ್ಗಿಸುವ ಹುನ್ನಾರ – ಲಕ್ಷ್ಮಣ ಸವದಿ

ಬೆಂಗಳೂರು: ಮುಡಾದಲ್ಲಿ ಅಕ್ರಮ‌ ನಡೆದಿರುವುದು ಸಿದ್ದರಾಮಯ್ಯ ಸಿಎಂ ಇದ್ದಾಗ ಅಲ್ಲ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಬಗ್ಗೆ ರಾಜ್ಯಪಾಲರ ನಡೆ ವಿಚಾರವಾಗಿ ವಿಕಾಸಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಅವರು ಮಾತನಾಡಿದರು.

ಇದು 20 ವರ್ಷಗಳ ಹಳೆಯ ಕೇಸು. ಈಗ್ಯಾಕೆ ತೆಗೆದರು?. ಅವರು ಪ್ರಾಸಿಕ್ಯೂಷನ್​ಗೆ ಕೇಳ್ತಾರೆ ಅಂತ ಸಿದ್ದರಾಮಯ್ಯ ಅವರಿಗೆ ನೊಟೀಸ್ ಯಾಕೆ ಕೊಟ್ರು?. ಹಿಂದುಳಿದ ವರ್ಗದ ಪ್ರಭಾವಿಯಾಗಿರುವ ಸಿದ್ದರಾಮಯ್ಯನವರ ವರ್ಚಸ್ಸು ಕುಗ್ಗಿಸಲು ಸಂಚು ನಡೆದಿದೆ ಎಂದರು.

ರಾಜ್ಯಪಾಲರು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ರಾಜ್ಯಪಾಲರು ಅನುಭವಿಗಳು. ಕೇಂದ್ರದಲ್ಲಿ ಅನೇಕ ವರ್ಷಗಳ ಕಾಲ‌ ಮಂತ್ರಿಯಾಗಿ ಕೆಲಸ ಮಾಡಿದವರು. ನಾನು ಅವರನ್ನು ಹತ್ತಿರದಿಂದ ನೋಡಿದ್ದೇನೆ. ಹಾಗಾಗಿ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಡಲ್ಲ ಅನ್ನುವ ವಿಶ್ವಾಸ ಇದೆ ಎಂದು ಹೇಳಿದರು.

ಬಿಜೆಪಿಯವರಿಗೆ ಪಾದಯಾತ್ರೆ ಮಾಡುವ ನೈತಿಕ ಹಕ್ಕಿಲ್ಲ. ಪಾದಯಾತ್ರೆ ಮಾಡುತ್ತಿರುವವರು ನೂರು ಪಟ್ಟು ಇವರಿಗಿಂತ ಅಕ್ರಮ ಮಾಡಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಏನು ಮಾಡಿದ್ದರು ಎಂಬುದು ಗೊತ್ತಿದೆ. ಒಂದು ಬೆರಳು ತೋರಿಸಿದಾಗ ನಾಲ್ಕು ಬೆರಳು ನಮ್ಮ ಕಡೆ ತೋರಿಸುತ್ತಿರುತ್ತವೆ. ಬಿಜೆಪಿಯವರ ಘೋಷಣೆ, ಆರೋಪ ನೋಡಿದರೆ ನಗು ಬರುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್​ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರವರೇ ಅವರವರ ಆಸ್ತಿಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಇದರಲ್ಲಿ ನಾನು ಏನೂ ಹೇಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಪುಟ ಪುನರ್‌ರಚನೆಯಲ್ಲಿ ನಿಮ್ಮ ಹೆಸರು ಕೇಳಿಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, ಅದು ಹೈಕಮಾಂಡ್ ಮತ್ತು ಸಿಎಂ ಸಿದ್ದರಾಮಯ್ಯನವರ ವಿವೇಚನೆಗೆ ಬಿಟ್ಟಿದ್ದು. ನಾನು ಹೈಕಮಾಂಡ್ ಮತ್ತು ಸಿಎಂ ನಿರ್ಧಾರಕ್ಕೆ ಬದ್ಧ ಎಂದು ಸವದಿ ಹೇಳಿದರು.

Leave a Reply

Your email address will not be published. Required fields are marked *