ಜನರ ಬಳಿ ಇನ್ನೂ ಇದೆ 7 ಸಾವಿರ ಕೋಟಿಗೂ ಹೆಚ್ಚು ₹2000 ನೋಟು

ಜನರ ಬಳಿ ಇನ್ನೂ ಇದೆ 7 ಸಾವಿರ ಕೋಟಿಗೂ ಹೆಚ್ಚು ₹2000 ನೋಟು

ನವದೆಹಲಿ: ದೇಶದಲ್ಲಿ ಎರಡು ಸಾವಿರ ರೂಪಾಯಿ ಮುಖಬೆಲೆ ನೋಟಿನ ಚಲಾವಣೆ ಹಿಂಪಡೆದಿರುವುದಕ್ಕೆ ಒಂದು ವರ್ಷ ಸಂದಿದೆ. ಆದರೆ, ಜನರ ಬಳಿ ಇನ್ನೂ ಏಳು ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಎರಡು ಸಾವಿರ ರೂಪಾಯಿ ನೋಟುಗಳಿವೆ ಎಂಬ ಅಂಶ ತಿಳಿದುಬಂದಿದೆ.

ಈ ವರ್ಷದ ಅಕ್ಟೋಬರ್ 1 ವರೆಗೆ ಒಟ್ಟು ಎರಡು ಸಾವಿರ ರೂಪಾಯಿ ಮುಖಬೆಲೆ ನೋಟುಗಳ ಪೈಕಿ ಶೇ. 98 ರಷ್ಟು ನೋಟುಗಳು ಬ್ಯಾಂಕುಗಳಿಗೆ ಮರಳಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಆರ್ಬಿಐ ಪ್ರಕಾರ, ಸಾರ್ವಜನಿಕರ ಬಳಿ ಇನ್ನೂ 7,117 ಕೋಟಿ ರೂ.ಗಳ ಗುಲಾಬಿ ಬಣ್ಣದ ನೋಟುಗಳಿವೆ. ಈ ನೋಟುಗಳ ಚಲಾವಣೆ ಹಿಂಪಡೆದ ಪ್ರಾರಂಭದಲ್ಲಿ ನೋಟಗಳ ಮರಳುವಿಕೆ ಹೆಚ್ಚಿತ್ತು, ಆದರೆ ಈಗ ಜನರು ನಿಧಾನವಾಗಿ ನೋಟುಗಳನ್ನು ಹಿಂತಿರುಗಿಸುತ್ತಿದ್ದಾರೆ.

RBI 2023ರ ಮೇ 23 ರಿಂದ ಸೆಪ್ಟೆಂಬರ್ 30ರ ಒಳಗಾಗಿ ಸ್ಥಳೀಯ ಬ್ಯಾಂಕ್ಗಳಲ್ಲಿ ಮತ್ತು 19 ಆರ್ಬಿಐ ಪ್ರಾದೇಶಿಕ ಕಚೇರಿಗಳಲ್ಲಿ ನೋಟುಗಳನ್ನು ಹಿಂದಿರುಗಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಗಡುವು ನೀಡಿತ್ತು. ನಂತರ ಆ ಗಡುವನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಗಿತ್ತು. ತದನಂತರ ಬ್ಯಾಂಕ್ ಶಾಖೆಗಳಲ್ಲಿ 2 ಸಾವಿರ ಮುಖಬೆಲೆಯ ಠೇವಣಿ ಮತ್ತು ವಿನಿಮಯ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ನೀವು ಇನ್ನೂ 2000 ರೂ ನೋಟುಗಳನ್ನು ಠೇವಣಿ ಮಾಡಬಹುದು: ಚಲಾವಣೆಯಿಂದ ಹಿಂಪಡೆದಿರುವ ಈ ಗುಲಾಬಿ ಬಣ್ಣದ ನೋಟುಗಳನ್ನು ಅಹಮದಾಬಾದ್, ಬೆಂಗಳೂರು, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ ಮತ್ತು ತಿರುವನಂತಪುರಂನಲ್ಲಿರುವ ಆರ್ಬಿಐ ಕಚೇರಿಗಳಲ್ಲಿ ಮತ್ತು ನಿಮ್ಮ ಹತ್ತಿರದ ಯಾವುದೇ ಅಂಚೆ ಕಚೇರಿಗಳಿಗೆ ಭೇಟಿ ಇಂಡಿಯಾ ಪೋಸ್ಟ್ ಮೂಲಕ ಠೇವಣಿ ಇಡಬಹುದು. ಸ್ಥಳೀಯ ಬ್ಯಾಂಕ್ಗಳಲ್ಲಿ 2 ಸಾವಿರ ರೂ ನೋಟುಗಳನ್ನು ಠೇವಣಿ ಇಡುವುದಕ್ಕೆ ಅವಕಾಶ ಇಲ್ಲ.

Leave a Reply

Your email address will not be published. Required fields are marked *