ಭೂಸ್ವಾಧೀನ ದಾಖಲೆಗಳಿಗೆ ಅಪಾಯ: PWD ಕಚೇರಿಯಲ್ಲಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ
ಬೆಂಗಳೂರು: KR ಸರ್ಕಲ್ನಲ್ಲಿರುವ PWD ಕಚೇರಿಯಲ್ಲಿ ಗಂಭೀರ ನಿರ್ವಹಣಾ ಲೋಪ ಬೆಳಕಿಗೆ ಬಂದಿದೆ. ವಿಶೇಷ ಭೂಸ್ವಾಧೀನಾಧಿಕಾರಿ (ರಾಷ್ಟ್ರೀಯ ಹೆದ್ದಾರಿ) ಕಚೇರಿಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಭೂಸ್ವಾಧೀನ ಹಾಗೂ ಪರಿಹಾರಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು ಮಳೆಯಿಂದ ನೆನೆದು ಹಾನಿಗೊಂಡಿರುವ ಘಟನೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಕಚೇರಿಯ ನೆಲಮಹಡಿಗೆ ನೀರು ನುಗ್ಗಿದ್ದು, ಅಲ್ಲಿ ಸಂಗ್ರಹಿಸಿದ್ದ ಫೈಲ್ಗಳು ಸಂಪೂರ್ಣವಾಗಿ ನೆನೆದು ಹಾಳಾಗಿವೆ ಎಂದು ಆರೋಪಿಸಲಾಗಿದೆ.
ಆಶ್ಚರ್ಯದ ವಿಷಯವೆಂದರೆ, ಈ ನೆನೆದ ಫೈಲ್ಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವ ಬದಲು ಕಚೇರಿ ಹೊರಗೆ ಇಟ್ಟು ಒಣಗಿಸುವ ಕೆಲಸ ಮಾಡಲಾಗುತ್ತಿದೆ. “ಹಪ್ಪಳ ಒಣಗಿಸುವ ರೀತಿ ದಾಖಲೆಗಳನ್ನು ಒಣಗಿಸುತ್ತಿದ್ದಾರೆ” ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಫೈಲ್ಗಳಲ್ಲಿನ ಪ್ರಮುಖ ಬರಹಗಳು, ಟಿಪ್ಪಣಿಗಳು ಹಾಗೂ ಅಧಿಕೃತ ವಿವರಗಳು ಬಹುತೇಕ ನಾಶವಾಗಿರುವುದಾಗಿ ತಿಳಿದುಬಂದಿದೆ.

ಭೂಸ್ವಾಧೀನ ಹಾಗೂ ಪರಿಹಾರ ಪ್ರಕ್ರಿಯೆಗೆ ಸಂಬಂಧಿಸಿದ ಈ ದಾಖಲೆಗಳು ಅತ್ಯಂತ ಮಹತ್ವದ್ದಾಗಿದ್ದು, ಅವುಗಳ ನಾಶದಿಂದ ಭವಿಷ್ಯದಲ್ಲಿ ಕಾನೂನು ಹಾಗೂ ಆಡಳಿತಾತ್ಮಕ ಗೊಂದಲಗಳು ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಸಂವೇದನಾಶೀಲ ದಾಖಲೆಗಳನ್ನು ಮುಂಚಿತವಾಗಿಯೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸದೇ ನಿರ್ಲಕ್ಷ್ಯ ತೋರಿರುವುದು ಗಂಭೀರ ತಪ್ಪು ಎಂದು ಆರೋಪಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ತನಿಖೆ ಹಾಗೂ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ದಾಖಲೆಗಳ ರಕ್ಷಣೆ ಹಾಗೂ ಜವಾಬ್ದಾರಿಯನ್ನು ನಿಗದಿಪಡಿಸಬೇಕು ಎಂಬ ಒತ್ತಾಯವೂ ಹೆಚ್ಚುತ್ತಿದೆ.
For More Updates Join our WhatsApp Group :



