ಮೂರು ವಿದ್ಯಾರ್ಥಿನಿಯರು 600ಕ್ಕೂ ಹೆಚ್ಚು ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ.
ಬೆಂಗಳೂರು: 2025-26ನೇ ಶೈಕ್ಷಣಿಕ ಸಾಲಿನಲ್ಲಿ ಜಿಬಿಎ ನಗರ ಪಾಲಿಕೆಗಳ ಪ್ರೌಢಶಾಲೆಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 2,063 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 1,833 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 88.85 ರಷ್ಟು ಫಲಿತಾಂಶ ದಾಖಲಾಗಿದೆ.
2025-26ನೇ ಶೈಕ್ಷಣಿಕ ಸಾಲಿನಲ್ಲಿ ಜಿಬಿಎ ನಗರ ಪಾಲಿಕೆಗಳ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ 34 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಿದ್ದು, ಒಟ್ಟು 1,833 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 106 ವಿದ್ಯಾರ್ಥಿಗಳು ಶೇ. 85 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
6 ಪ್ರೌಢಶಾಲೆಗಳಲ್ಲಿ ಶೇ. 100 ರಷ್ಟು ಫಲಿತಾಂಶ:
ಜಿಬಿಎ ವ್ಯಾಪ್ತಿಯ ಪಶ್ಚಿಮ ನಗರ ಪಾಲಿಕೆಯ ಬಸವನಗುಡಿ, ಸುಬ್ರಮಣ್ಯನಗರ, ಮಾರಪ್ಪನಪಾಳ್ಯ, ಕೇಂದ್ರ ನಗರ ಪಾಲಿಕೆಯ ಕಾಟನ್ ಪೇಟೆ, ಶಾಂತಿನಗರ ಮತ್ತು ಉತ್ತರ ನಗರ ಪಾಲಿಕೆಯ ಮತ್ತಿಕೆರೆ ಪ್ರೌಢಶಾಲೆಗಳು ಶೇ. 100 ರಷ್ಟು ಫಲಿತಾಂಶ ದಾಖಲಿಸಿ ಅಗ್ರಸ್ಥಾನ ಪಡೆದು ಪಾಲಿಕೆಗೆ ಕೀರ್ತಿ ತಂದಿವೆ.
ಮೂರು ವಿದ್ಯಾರ್ಥಿನಿಯರು 600 ಕ್ಕೂ ಹೆಚ್ಚು ಅಂಕ:
ಪಶ್ಚಿಮ ನಗರ ಪಾಲಿಕೆಯ ಬೈರವೇಶ್ವರನಗರ ಪ್ರೌಢಶಾಲೆಯ ವಿದ್ಯಾರ್ಥಿನಿ ಗಾನಶ್ರೀ ಎಸ್ ರವರು 625 ಕ್ಕೆ 611 ಅಂಕಗಳನ್ನು ಪಡೆದು ಶೇ. 97.76 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ.
ಉತ್ತರ ನಗರ ಪಾಲಿಕೆಯ ಗಂಗಾನಗರ ಪ್ರೌಢಶಾಲೆಯ ವಿದ್ಯಾರ್ಥಿನಿ ಜಾರಾ ಫಾತಿಮಾ ರವರು 625 ಕ್ಕೆ 610 ಅಂಕಗಳನ್ನು ಪಡೆದು ಶೇ. 97.60 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ.
ಪಶ್ಚಿಮ ನಗರ ಪಾಲಿಕೆಯ ಹೇರೋಹಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿನಿ ಲಾವಣ್ಯ ಎ ರವರು 625ಕ್ಕೆ 605 ಅಂಕಗಳನ್ನು ಪಡೆದು ಶೇ. 96.80 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ.
ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಪ್ರೋತ್ಸಾಹಧನ:
ಜಿಬಿಎ ವ್ಯಾಪ್ತಿಯ 34 ಪ್ರೌಢಶಾಲೆಗಳಲ್ಲಿ *ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 106 ವಿದ್ಯಾರ್ಥಿಗಳಿಗೆ ಪಾಲಿಕೆಯ ವತಿಯಿಂದ ತಲಾ ರೂ. 25,000 ಪ್ರೋತ್ಸಾಹಧನ* ನೀಡಿ ಗೌರವಿಸಲಾಗುವುದು.
ಮುಖ್ಯ ಆಯುಕ್ತರಿಂದ ಅಭಿನಂದನೆ:
ಜಿಬಿಎ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
For More Updates Join our WhatsApp Group :




