ನಾಲ್ಜನೇ ಮಗುವೂ ಹೆಣ್ಣಾಯಿತು ಎಂದು 6 ದಿನದ ಹಸುಳೆ ಹತ್ಯೆ ಮಾಡಿದ ತಾಯಿ

ನಾಲ್ಜನೇ ಮಗುವೂ ಹೆಣ್ಣಾಯಿತು ಎಂದು ಆರು ದಿನದ ಹಸುಳೆ ಹತ್ಯೆ ಮಾಡಿದ ತಾಯಿ

ನವದೆಹಲಿ: ನಾಲ್ಕನೇ ಮಗುವೂ ಹೆಣ್ಣು ಆಯಿತು ಎಂದು ಹೆತ್ತ ತಾಯಿಯೇ ತನ್ನ ಆರು ದಿನದ ಹಸುಳೆಯನ್ನು ಪಕ್ಕದ ಮನೆಯ ಛಾವಣಿ ಮೇಲೆ ಎಸೆದು ಹತ್ಯೆ ಮಾಡಿರುವ ದಾರುಣ ಘಟನೆ ಪಶ್ಚಿಮ ದೆಹಲಿಯ ಖಯಾಲ್​ ಪ್ರದೇಶದಲ್ಲಿ ನಡೆದಿದೆ.

ಶುಕ್ರವಾರ ಬೆಳಗಿನ ಜಾವ 5.30ರ ಸುಮಾರಿಗೆ ತಮ್ಮ ಆರು ದಿನದ ಹೆಣ್ಣು ಶಿಶು ಕಣ್ಮರೆಯಾಗಿದೆ ಎಂಬ ದೂರು ಪೊಲೀಸರಿಗೆ ಬಂದಿತು. ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆರಂಭದಲ್ಲಿ ತಾಯಿ ಶಿವಾನಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆಕೆ ಹಿಂದಿನ ರಾತ್ರಿ ತಾನು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದು, ಮಧ್ಯರಾತ್ರಿ ಎರಡು ಗಂಟೆಗೆ ಮಗುವಿಗೆ ಹಾಲು ಕುಡಿಸಿ ಮಲಗಿಸಿದ್ದೆ. ಬೆಳಗ್ಗೆ 4.30ಕ್ಕೆ ಎಚ್ಚರವಾದಾಗ ಮಗು ಇರಲಿಲ್ಲ ಎಂದು ತಿಳಿಸಿದ್ದರು ಎಂದು ಪಶ್ಚಿಮ ವಿಭಾಗದ ಪೊಲೀಸ್​ ಉಪ ಆಯುಕ್ತ ವಿಚಿತ್ರ ವೀರ್​ ತಿಳಿಸಿದ್ದಾರೆ.

ಘಟನೆ ಸಂಬಂಧ ಪೊಲೀಸರು ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಜಾಲಾಡಿದ್ದಾರೆ. ಪೊಲೀಸರು ಮಗುವಿಗೆ ಹುಡುಕಾಟ ನಡೆಸುವಾಗ ತಾಯಿ ಶಿವಾನಿ, ಶಸ್ತ್ರಚಿಕಿತ್ಸೆಯ ಹೋಲಿಗೆ ಬಿಚ್ಚಿಸಿಕೊಳ್ಳಲು ಆಸ್ಪತ್ರೆಗೆ ಹೋಗಬೇಕಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆಕೆ ನಡೆ ಪೊಲೀಸರಿಗೆ ಅನುಮಾನ ಮೂಡಿಸಿದ್ದರೂ ವೈದ್ಯಕೀಯ ಕಾರಣದಿಂದ ಆಕೆಗೆ ಹೋಗಲು ಅನುಮತಿ ನೀಡಿದ್ದರು.

ಶೋಧದ ವೇಳೆ ನೆರೆ ಮನೆಯ ಛಾವಣಿ ಮೇಲೆ ಬ್ಯಾಗ್​ವೊಂದು ಪತ್ತೆಯಾಗಿದ್ದು, ಅದರಲ್ಲಿ ಮಗು ಇರುವುದು ಕಂಡು ಬಂದಿತ್ತು. ತಕ್ಷಣಕ್ಕೆ ಮಗುವನ್ನು ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಮಗು ಅಸುನೀಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿಯ ನಡೆ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರ ತಂಡವೊಂದು ಶಿವಾನಿ ಅವರನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಕೃತ್ಯವನ್ನು ತಾಯಿಯೇ ಎಸಗಿರುವುದು ಬಹಿರಂಗಗೊಂಡಿದೆ. ಮೃತಪಟ್ಟಿರುವ ಮಗುವು ತನ್ನ ನಾಲ್ಕನೇ ಮಗುವಾಗಿದ್ದು, ಈಗಾಗಲೇ ಎರಡು ಕೂಸುಗಳು ಸಾವನ್ನಪ್ಪಿವೆ. ಸಾಮಾಜಿಕ ಕಳಂಕದ ಕಾರಣದಿಂದ ಈ ಕೃತ್ಯ ಎಸಗಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ.

Leave a Reply

Your email address will not be published. Required fields are marked *