ನಿಂಬೆಯ ನಾಡು ವಿಜಯಪುರ: D.K ಶಿವಕುಮಾರ್ ಹವಾ ಜೋರು.

ನಿಂಬೆಯ ನಾಡು ವಿಜಯಪುರ: D.K ಶಿವಕುಮಾರ್ ಹವಾ ಜೋರು.

ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ.

ವಿಜಯಪುರ : ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್, ವಿಜಯಪುರ ಜಿಲ್ಲೆ ನಿಜಕ್ಕೂ “ನಿಂಬೆಯ ನಾಡು, ಅಭಿವೃದ್ಧಿಯ ಬೀಡು”ಎಂದು ಹೇಳಿದರು. ನಿಂಬೆಹಣ್ಣು ರುಚಿಗೆ ಮಾತ್ರವಲ್ಲದೆ ಪೂಜೆಗೂ ಹಾಗೂ ದೃಷ್ಟಿ ತೆಗೆಯಲು ಸಹ ಬಳಸುವಷ್ಟು ಶ್ರೇಷ್ಠವಾದದ್ದು ಎಂದು ನಿಂಬೆಯ ಮಹತ್ವವನ್ನು ವಿವರಿಸಿದರು.

ಗ್ಯಾರಂಟಿ ಸರ್ಕಾರಕ್ಕೆ 10 ಶಾಸಕರನ್ನು ನೀಡಿರುವ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಜನರಿಗೆ ಅವರು ಹೃತ್ಪೂರ್ವಕವಾಗಿ ಧನ್ಯವಾದ ಸಲ್ಲಿಸಿದರು. ಈ ಎರಡು ಜಿಲ್ಲೆಗಳ ಜನರಿಗೆ ಸರ್ಕಾರ ಹಾಗೂ ಪಕ್ಷದ ಮೇಲೆ ಅಪಾರ ವಿಶ್ವಾಸವಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಿಗೆ ಮಹಾನ್ ವ್ಯಕ್ತಿಗಳ ಹೆಸರನ್ನು ಇಟ್ಟಿರುವುದನ್ನು ಉಲ್ಲೇಖಿಸಿದ ಅವರು, ವಿಜಯಪುರದಲ್ಲಿ ಕಿತ್ತೂರು ರಾಣಿ ಚನ್ನಮ್ಮ, ದೇವರಹಿಪ್ಪರಗಿಯಲ್ಲಿ ಮಡಿವಾಳ ಮಾಚಯ್ಯ, ಸುರಪುರದಲ್ಲಿ ರಾಜಾ ವೆಂಕಟಪ್ಪ ನಾಯಕ ಹಾಗೂ ಸಿಂದಗಿಯಲ್ಲಿ ಚನ್ನವೀರ ಸ್ವಾಮೀಜಿ ಅವರ ಹೆಸರುಗಳನ್ನು ಇಟ್ಟಿರುವುದಾಗಿ ತಿಳಿಸಿದರು. ಇದು “ಸರ್ವ ಧರ್ಮ ಸಮ ಭಾವ” ತತ್ವದಡಿ ಎಲ್ಲರನ್ನು ಸಮಾನವಾಗಿ ಗೌರವಿಸುವ ಸರ್ಕಾರದ ನಿಲುವನ್ನು ಪ್ರತಿಬಿಂಬಿಸುತ್ತದೆ ಎಂದರು.

ಬಸವಣ್ಣನವರ ನೆಲವಾಗಿರುವ ಈ ಪ್ರದೇಶ ಸರ್ವಜನಾಂಗದ ಶಾಂತಿಯ ತೋಟವಾಗಿದೆ ಎಂದು ಹೇಳಿದ ಅವರು, ಎಲ್ಲಾ ಶಾಸಕರು ಒಗ್ಗಟ್ಟಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು. ಒಣಭೂಮಿಯಾಗಿದ್ದ ಈ ಜಿಲ್ಲೆಗೆ ನೀರಾವರಿ ಸೌಲಭ್ಯ ಒದಗಿಸಿ ಕಬ್ಬು, ನಿಂಬೆ ಹಾಗೂ ದ್ರಾಕ್ಷಿ ಬೆಳೆಗಳನ್ನು ಬೆಳೆಸುವ ಮೂಲಕ ರೈತರ ಬದುಕನ್ನು ಸುಧಾರಿಸುವ ಕೆಲಸ ನಡೆಯುತ್ತಿದೆ. ಎಲ್ಲರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *