ಮೈಸೂರು: ನಾಡಹಬ್ಬ ದಸರಾಗೆ ಭರದ ಸಿದ್ಧತೆ ನಡೆಯುತ್ತಿದೆ. ಇನ್ನು ದಸರಾದಲ್ಲಿ ಭಾಗವಹಿಸಲು ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿರುವ ಗಜಪಡೆಯು ಅರಣ್ಯ ಇಲಾಖೆ ಆವರಣದಲ್ಲಿ ವಿಶ್ರಾಂತಿ ತೆಗೆದುಕೊಂಡಿದ್ದು, ಇಂದು ಜಯ ಮಾರ್ತಾಂಡ ದ್ವಾರದ ಮೂಲಕ ಸಾಂಪ್ರದಾಯಿಕ ಸ್ವಾಗತದೊಂದಿಗೆ ಅರಮನೆ ಪ್ರವೇಶ ಮಾಡಲಿವೆ.
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಬುಧವಾರ ವೀರನಹೊಸಹಳ್ಳಿಯಿಂದ ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ್ದ ಅಭಿಮನ್ಯು ನೇತೃತ್ವದ ಮೊದಲ ಹಂತದ 9 ಗಜಪಡೆ ಅರಣ್ಯ ಭವನದ ಆವರಣದಲ್ಲಿ ವಾಸ್ತವ್ಯ ಹೂಡಿದ್ದವು. ಗುರುವಾರ ಅರಣ್ಯ ಭವನದ ಆವರಣದಲ್ಲಿ ಗಜಪಡೆಗೆ ಮಾವುತರು ಹಾಗೂ ಕಾವಾಡಿಗಳು ಮಜ್ಜನ ಮಾಡಿಸಿದ್ದಾರೆ. ಇಂದು ಅರಣ್ಯ ಭವನದಿಂದ ಅರಮನೆಗೆ ಗಜಪಡೆಯನ್ನು ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇನ್ನೊಂದು ಕಡೆ ವಿವಿಧ ಶಿಬಿರಗಳಿಂದ ಆಗಮಿಸಿರುವ ಆನೆಗಳು ಪರಸ್ಪರ ಪರಿಚಯ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.
ಗಜಪಡೆ ಅರಮನೆ ಪ್ರವೇಶ: ಅರಣ್ಯ ಭವನದಲ್ಲಿ ಇಂದು ಬೆಳಗ್ಗೆ ಅರಣ್ಯಾಧಿಕಾರಿಗಳು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅಭಿಮನ್ಯು ನೇತೃತ್ವದ 9 ಗಜಪಡೆಯನ್ನ ಅರಮನೆಗೆ ರಸ್ತೆ ಮೂಲಕ ಕರೆತರಲಿದ್ದಾರೆ. ಅರಮನೆ ಮುಂಭಾಗದ ಜಯ ಮಾರ್ತಂಡ ದ್ವಾರದ ಬಳಿ ಬೆಳಗ್ಗೆ 10 ರಿಂದ 10.30ರ ತುಲಾ ಲಗ್ನದಲ್ಲಿ ಗಜಪಡೆಯನ್ನು ಸ್ವಾಗತ ಮಾಡಲಾಗುತ್ತದೆ. ಇಂದಿನಿಂದ ಅಕ್ಟೋಬರ್ 12ರ ಜಂಬೂ ಸವಾರಿ ಮೆರವಣಿಗೆ ಮುಗಿಯುವವರೆಗೂ ಅರಮನೆಯಲ್ಲೇ ವಾಸ್ತವ್ಯ ಹೂಡಲಿವೆ. ನಾಳೆ(ಶನಿವಾರ) ಆನೆಗಳ ತೂಕ ಪರಿಶೀಲನೆ ನಡೆಸಿದ ನಂತರ ಅವುಗಳಿಗೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ವಿಶೇಷ ಆಹಾರ ನೀಡಿ ತಾಲೀಮು ನಡೆಸುವ ಮೂಲಕ ಜಂಜೂ ಸವಾರಿ ಮೆರವಣಿಗೆಗೆ ಸಿದ್ಧತೆ ಮಾಡಲಾಗುತ್ತದೆ.
ಮೊದಲ ಹಂತದಲ್ಲಿ ಜಂಬೂ ಸವಾರಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ, ಅಭಿಮನ್ಯು (58), ಭೀಮ (24), ಗೋಪಿ (41), ಧನಂಜಯ (43), ಕಂಜನ್(25), ರೋಹಿಣಿ (22), ಲಕ್ಷ್ಮೀ (53) , ವರಲಕ್ಷ್ಮಿ (67) , ಏಕಲವ್ಯ (38) ಮೊದಲಾದ 9 ಆನೆಗಳು ಗಜಪಯಾಣದಲ್ಲಿ ಮೈಸೂರಿಗೆ ಆಗಮಿಸಿದ್ದವು.