ವಿಶೇಷ ನ್ಯಾಯಾಲಯದಿಂದ ಮಹತ್ವದ ತೀರ್ಪು
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಅಂತಿಮವಾಗಿ ಶಿಕ್ಷೆ ಪ್ರಕಟವಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಪ್ರಕರಣದಲ್ಲಿ 15ನೇ ಆರೋಪಿ ಆಗಿರುವ ವಿನಯ್ ಕುಲಕರ್ಣಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇನ್ನು 19ನೇ ಆರೋಪಿ ಚನ್ನಕೇಶವ ಟಿಂಗರಿಕರ್‌ಗೆ 7 ವರ್ಷಗಳ ಜೈಲು ಶಿಕ್ಷೆ ನೀಡಲಾಗಿದೆ. ಜೊತೆಗೆ, ಯೋಗೇಶ್ ಗೌಡ ಅವರ ಮಕ್ಕಳಿಗೆ 16 ಲಕ್ಷ ರೂ. ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿದೆ.
ಒಟ್ಟು 21 ಆರೋಪಿಗಳಿದ್ದ ಈ ಪ್ರಕರಣದಲ್ಲಿ ಇಬ್ಬರು ಮಾಫಿಸಾಕ್ಷಿಗಳಾಗಿದ್ದು, ಉಳಿದವರ ಪೈಕಿ 19 ಮಂದಿಯನ್ನು ನ್ಯಾಯಾಲಯ ದೋಷಿಗಳೆಂದು ಘೋಷಿಸಿತ್ತು. ಎ1 ಬಸವರಾಜ ಮುತ್ತಗಿ ಮಾಫಿಸಾಕ್ಷಿಯಾಗಿ ಪರಿಗಣಿಸಲ್ಪಟ್ಟಿದ್ದರೆ, ಎ17 ಶಿವಾನಂದ ವಿರುದ್ಧ ಸಿಬಿಐ ಮತ್ತೆ ಆರೋಪಿಯಾಗಿ ಪರಿಗಣಿಸುವಂತೆ ಮನವಿ ಸಲ್ಲಿಸಿದೆ.
ಇನ್ನೂ ಎ20 ವಾಸುದೇವ ನಿಲೇಕಣಿ ಹಾಗೂ ಎ21 ಸೋಮಶೇಖರರನ್ನು ನ್ಯಾಯಾಲಯ ಬಿಡುಗಡೆಗೊಳಿಸಿದೆ. ಉಳಿದ ಆರೋಪಿಗಳಾದ ವಿಕ್ರಮ್, ಕೀರ್ತಿ ಕುಮಾರ್, ಸಂದೀಪ್, ವಿನಾಯಕ್, ಮಹಾಬಲೇಶ್ವರ್ ಅಲಿಯಾಸ್ ಮುದಕ, ಸಂತೋಷ್, ದಿನೇಶ್, ಅಶ್ವಥ್, ಸುನಿಲ್, ನಜೀರ್ ಅಹಮದ್, ಷಾನವಾಜ್, ನೂತನ್, ಹರ್ಷಿತ್, ಚಂದ್ರು ಮಾಮ, ವಿಕಾಸ್ ಕಲಬುರ್ಗಿ ಸೇರಿದಂತೆ ಇತರರನ್ನು ದೋಷಿಗಳೆಂದು ತೀರ್ಪು ನೀಡಲಾಗಿದೆ.
ಈ ತೀರ್ಪು ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಪರಿಣಾಮ ಬೀರಿದ್ದು, ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನಕ್ಕೂ ಧಕ್ಕೆಯಾಗಿದೆ.
For More Updates Join our WhatsApp Group :




