ಪಾರಿವಾಳದ ವಿಚಾರಕ್ಕೆ ಯುವಕರ ಜಗಳ: ಕೊ*ಯಲ್ಲಿ ಅಂತ್ಯ

ಪಾರಿವಾಳದ ವಿಚಾರಕ್ಕೆ ಯುವಕರ ಜಗಳ: ಕೊ*ಯಲ್ಲಿ ಅಂತ್ಯ

ಬೆಂಗಳೂರಿನ ರಾಜಗೋಪಾಲನಗರದಲ್ಲಿ ಭೀಕರ ಘಟನೆ

ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪಿನ ನಡುವೆ ನಡೆದ ಜಗಳವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ  ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಾರಿವಾಳ ಕಳ್ಳತನದ ವಿಚಾರವಾಗಿ ಉಂಟಾದ ಕಿರಿಕ್‌ನಲ್ಲಿ ಆಟೋ ಚಾಲಕ ಮಲ್ಲಿಕಾರ್ಜುನ್ (24) ಎಂಬಾತ ಕೊಲೆಯಾಗಿದ್ದಾರೆ.

ಪಾರಿವಾಳ ಕಳ್ಳತನ, ಜಗಳ ಘಟನೆಯ ವಿವರ

ಲಗ್ಗೆರೆಯ ನಿವಾಸಿಗಳಾದ ಶಂಕರ್ ರಾವ್ ಮತ್ತು ಅನ್ನಪೂರ್ಣ ದಂಪತಿಯ ಪುತ್ರ ಮಲ್ಲಿಕಾರ್ಜುನ್ ಕಳೆದ ಸೋಮವಾರ ರಾತ್ರಿ ಕೊಲೆಯಾದ ದುರ್ದೈವಿ. ಸೋಮವಾರ ಸಂಜೆ ಮಲ್ಲಿಕಾರ್ಜುನ್ ಸ್ನೇಹಿತ ಪ್ರಶಾಂತ್ ಎಂಬಾತ ಸಾಕಿದ್ದ ಪಾರಿವಾಳವನ್ನು ಅದೇ ಏರಿಯಾದ ಸುರೇಂದ್ರ, ದರ್ಶನ್ ಹಾಗೂ ಮಹೇಂದ್ರ ಎಂಬುವವರ ಗುಂಪು ಕಳ್ಳತನ ಮಾಡಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಎರಡೂ ಗುಂಪುಗಳ ನಡುವೆ ಜಗಳ ಆರಂಭವಾಗಿತ್ತು.

ಈ ವೇಳೆ ಸ್ನೇಹಿತ ಪ್ರಶಾಂತ್ ಕರೆ ಮಾಡಿದ್ದಾನೆಂದು ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಮಲ್ಲಿಕಾರ್ಜುನ್ ಧಾವಿಸಿದ್ದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಆರೋಪಿಗಳ ಗುಂಪು ಮಲ್ಲಿಕಾರ್ಜುನ್ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಬೆನ್ನು ಮತ್ತು ದೇಹದ ಹಲವು ಭಾಗಗಳಿಗೆ ಚಾಕುವಿನಿಂದ ಇರಿದ ಪರಿಣಾಮ ಮಲ್ಲಿಕಾರ್ಜುನ್ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದರು.

ಐವರು ಆರೋಪಿಗಳ ಬಂಧನ

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಜಗೋಪಾಲನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸುರೇಂದ್ರ, ದರ್ಶನ್ ಮತ್ತು ಮಹೇಂದ್ರ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

 ‘ಪಾರಿವಾಳದ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ, ಸದ್ಯ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ’ ಎಂದು ವಾಯುವ್ಯ ವಿಭಾಗದ ಡಿಸಿಪಿ ಡಿ.ಎಲ್. ನಾಗೇಶ್ ಮಾಹಿತಿ ನೀಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *