ಮಂಡ್ಯ: ‘ಕರ್ನಾಟಕ ಸುವರ್ಣ ಸಂಭ್ರಮ’ದ ಅಂಗವಾಗಿ ಕನ್ನಡದ ಮೊದಲ ಶಾಸನವಾದ ‘ಹಲ್ಮಿಡಿ ಶಿಲಾ ಶಾಸನ’ದ ಪ್ರತಿಕೃತಿ ಸ್ತಂಭವನ್ನು ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ಉದ್ಯಾನದಲ್ಲಿ ನಿರ್ಮಿಸಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ತಯಾರಿಸಲಾದ ಹಲ್ಮಿಡಿ ಶಾಸನದ ಕಲ್ಲಿನ ಪ್ರತಿಕೃತಿಯನ್ನು ಮಂಡ್ಯಕ್ಕೆ ತರಿಸಿಕೊಂಡು, ಅಕಾಡೆಮಿಯು ಸಿವಿಲ್ ಕಾಮಗಾರಿಗೆ ಸಿದ್ಧಪಡಿಸಿರುವ ನೀಲನಕಾಶೆ ಪ್ರಕಾರ ಪ್ರತಿಷ್ಠಾಪಿಸಲಾಗಿದೆ.
ಕಾಂಕ್ರೀಟ್ ತಳಹದಿಯ ಮೇಲೆ ಗ್ರಾನೈಟ್ ಉದ್ಘಾಟನಾ ಫಲಕವನ್ನು ಅಳವಡಿಸಿ, ಅದರ ಮೇಲೆ ಗ್ರಾನೈಟ್ ಶಿಲೆಯನ್ನು ಇಟ್ಟು, ಅದರ ಮೇಲ್ಭಾಗದಲ್ಲಿ ಹಲ್ಮಿಡಿ ಶಾಸನದ ಶಿಲೆಯ ಪ್ರತಿಕೃತಿಯನ್ನು ಪ್ರತಿಷ್ಠಾಪಿಸಲಾಗಿದೆ. ಹಲ್ಮಿಡಿ ಶಾಸನದ ಶಿಲೆಯು ಸುಮಾರು 2 ಅಡಿ ಅಗಲ, 4 ಅಡಿ ಉದ್ದವಿದೆ. ಒಟ್ಟಾರೆ ಪ್ರತಿಕೃತಿ ಸ್ತಂಭವು 7 ಅಡಿ ಎತ್ತರ ಮತ್ತು 4 ಅಡಿ ಅಗಲದ ವಿನ್ಯಾಸದಲ್ಲಿ ನಿರ್ಮಾಣವಾಗಿದೆ.
₹2 ಲಕ್ಷ ವೆಚ್ಚ: ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ₹2 ಲಕ್ಷವನ್ನು ಬಳಕೆ ಮಾಡಿಕೊಂಡು, ಲೋಕೋಪಯೋಗಿ ಇಲಾಖೆಯು ಒಂದು ವಾರದಲ್ಲಿ ಪ್ರತಿಕೃತಿ ಸ್ತಂಭವನ್ನು ನಿರ್ಮಾಣ ಮಾಡಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ
ನ.1ರಂದು ನಡೆಯುವ ಕರ್ನಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ಬೆಳಿಗ್ಗೆ 10.30ಕ್ಕೆ ಹಲ್ಮಿಡಿ ಶಿಲಾ ಶಾಸನದ ಪ್ರತಿಕೃತಿ ಸ್ತಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ. ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ವಿವಿಧ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಗಣ್ಯರು ಪಾಲ್ಗೊಳ್ಳಲಿದ್ದಾರೆ. 16 ಸಾಲುಗಳ ದತ್ತಿಶಾಸನ
ಹಲ್ಮಿಡಿ ಶಾಸನವು ಕದಂಬ ಲಿಪಿಯಲ್ಲಿರುವ ಅತ್ಯಂತ ಹಳೆಯ ಕನ್ನಡ ಶಾಸನವಾಗಿದೆ. ಇದನ್ನು ಹಾಸನ ಜಿಲ್ಲೆಯ ಗಡಿಯಲ್ಲಿರುವ ಹಲ್ಮಿಡಿ ಗ್ರಾಮದಲ್ಲಿ 1936ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಪುರಾತತ್ವ ನಿರ್ದೇಶಕರಾಗಿದ್ದ ಡಾ.ಎಂ.ಎಚ್.ಕೃಷ್ಣ ಅವರು ಪತ್ತೆ ಮಾಡಿದರು. ಶಾಸನವು 16 ಸಾಲುಗಳನ್ನು ಹೊಂದಿದ್ದು, ಮರಳು ಶಿಲ್ಪದ ಮೇಲೆ ಕೆತ್ತಲ್ಪಟ್ಟಿದೆ. ಇದು ಹಳಗನ್ನಡ ಹಾಗೂ ಬ್ರಾಹ್ಮೀ ಲಿಪಿಗಳನ್ನು ಹೋಲುವಂತಹ ಕನ್ನಡ ಲಿಪಿಯಲ್ಲಿದೆ. ಕದಂಬ ವಂಶದ ಕಾಕುಸ್ಥವರ್ಮ ಬರೆಸಿದ ದತ್ತಿಶಾಸನ ಇದಾಗಿದೆ.
ಶತ್ರು ರಾಜರ ಮೇಲೆ ಹೋರಾಡಿ ಗೆದ್ದ ವಿಜಯರಸ ಎಂಬ ಯೋಧನಿಗೆ, ಪಲ್ಮಿಡಿ ಮತ್ತು ಮೂಳಿವಳ್ಳಿಯನ್ನು ದತ್ತಿಯಾಗಿ ಬಿಟ್ಟ ರಾಜಾಜ್ಞೆಯನ್ನು ಈ ಶಾಸನ ನಿರೂಪಿಸುತ್ತದೆ. ಹಲ್ಮಿಡಿ ಶಾಸನ ಸಂಸ್ಕೃತ ಪ್ರಭಾವಕ್ಕೆ ಒಳಗಾಗಿದ್ದರೂ, ಆ ಕಾಲದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸಲಾಗುತ್ತಿತ್ತು ಎಂಬುದನ್ನು ಇದು ತೋರಿಸುತ್ತದೆ.
ಕನ್ನಡದ ಮೊದಲ ಶಾಸನ ‘ಹಲ್ಮಿಡಿ ಶಾಸನ’ ಶಾಸನದ ಪ್ರತಿಕೃತಿ ರೂಪಿಸಿದ ಶಿಲ್ಪಕಲಾ ಅಕಾಡೆಮಿ 1936ರಲ್ಲಿ ಪತ್ತೆಯಾದ ದತ್ತಿ ಶಾಸನಕುಮಾರ ಜಿಲ್ಲಾಧಿಕಾರಿ ಮಂಡ್ಯ ಕನ್ನಡದ ಮೊದಲ ಶಾಸನವಾದ ಹಲ್ಮಿಡಿ ಶಿಲಾ ಶಾಸನದ ಬಗ್ಗೆ ಕನ್ನಡಿಗರಿಗೆ ಜಾಗೃತಿ ಮೂಡಿಸಲು ಕಾವೇರಿ ಉದ್ಯಾನದಲ್ಲಿ ಪ್ರತಿಕೃತಿ ಸ್ತಂಭವನ್ನು ನಿರ್ಮಾಣ ಮಾಡಲಾಗಿದೆ ‘ಸಕ್ಕರೆ ನಾಡು’ ಮಂಡ್ಯ ಜಿಲ್ಲೆಯಲ್ಲಿ ಶೇ 91.9ರಷ್ಟು ಮಂದಿ ಕನ್ನಡ ಭಾಷಿಕರಿದ್ದು ರಾಜ್ಯದಲ್ಲೇ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಎನಿಸಿದೆ. ರಾಜ್ಯದಲ್ಲಿ ಪ್ರಸ್ತುತ ಶೇ 66.54ರಷ್ಟು ಮಂದಿ ಮಾತ್ರ ಕನ್ನಡ ಮಾತನಾಡುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಹಾಸನ (ಶೇ 87) ಚಾಮರಾಜನಗರ (ಶೇ 86.1) ತುಮಕೂರು (ಶೇ 85) ರಾಮನಗರ (ಶೇ 83.5) ಮೈಸೂರು (ಶೇ 81) ಈ ಜಿಲ್ಲೆಗಳು ಕ್ರಮವಾಗಿ 2ರಿಂದ 6ನೇ ಸ್ಥಾನದಲ್ಲಿವೆ. ಅನ್ಯಭಾಷೆಯ ಪ್ರಭಾವ ಕಡಿಮೆ ಇರುವ ಜಿಲ್ಲೆಗಳಲ್ಲಿ ಕನ್ನಡ ಭಾಷಿಕರ ಸಂಖ್ಯೆ ಹೆಚ್ಚು ಕಂಡು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 9.3ರಷ್ಟು ಮಂದಿ ಮಾತ್ರ ಕನ್ನಡ ಮಾತನಾಡುತ್ತಾರೆ. ಆದ್ರೆ ಇಲ್ಲಿ ತುಳು ಭಾಷಿಕರು ಹೆಚ್ಚಾಗಿರುವ ಕಾರಣ ಈ ರೀತಿಯ ಅಂಕಿಅಂಶವಿದೆ ಎನ್ನಲಾಗಿದೆ. ಈ ಜನಸಂಖ್ಯೆಯಲ್ಲಿ ಬಹುಪಾಲು ಮಂದಿಯ ಮಾತೃಭಾಷೆ ತುಳುವಾಗಿದೆ. ಇದಲ್ಲದೆ ಕೊಡಗು (ಶೇ 32.7) ಉಡುಪಿ (ಶೇ 42.7) ಜಿಲ್ಲೆಯಲ್ಲೂ ಕಡಿಮೆ ಪ್ರಮಾಣದ ಮಂದಿ ಕನ್ನಡ ಮಾತನಾಡುತ್ತಾರೆ. ಬೆಂಗಳೂರು ನಗರ (ಶೇ 44.5) ಕೋಲಾರ (51.5) ಬೀದರ್ (ಶೇ 53) ಉತ್ತರ ಕನ್ನಡ (ಶೇ 55.4) ಚಿಕ್ಕಬಳ್ಳಾಪುರ (ಶೇ 59.4) ಜಿಲ್ಲೆಗಳಲ್ಲೂ ಕನ್ನಡ ಭಾಷಿಕರು ಕಡಿಮೆ ಇರುವುದನ್ನು ನೋಡಬಹುದು. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಗಡಿ ಪ್ರದೇಶವಾಗಿರುವುದರಿಂದ ತಮಿಳು ತೆಲುಗು ಭಾಷಿಕರು ಹೆಚ್ಚಾಗಿ ಸಿಗುತ್ತಾರೆ. ಇತ್ತ ಬೆಳಗಾವಿಯಲ್ಲಿ ಶೇ 68ರಷ್ಟು ಮಂದಿ ಕನ್ನಡ ಮಾತನಾಡುತ್ತಾರೆ. ಉಳಿದಂತೆ ಅಲ್ಲಿ ಮರಾಠಿ ಭಾಷಿಕರ ಸಂಖ್ಯೆ ಹೆಚ್ಚಿದೆ. ಸಕ್ಕರೆ ನಾಡಲ್ಲಿ ಕನ್ನಡದ ಅಕ್ಕರೆ!