ದ.ಕನ್ನಡ: ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಠಿ ಮಹೋತ್ಸವ ನಡೆದ ನಂತರದಲ್ಲಿ ಕುಮಾರಧಾರ ನದಿಯಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ಜರುಗಿತು.
ಕುಮಾರ ಪರ್ವತದ ತಪ್ಪಲಿನಲ್ಲಿ ಹುಟ್ಟಿ ಕುಕ್ಕೆ ಸುಬ್ರಹ್ಮಣ್ಯ ಮೂಲಕ ಹರಿಯುವ ಪುಣ್ಯ ಕುಮಾರಧಾರಾ ನದಿಯ ಪವಿತ್ರ ತೀರ್ಥದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ಶ್ರೀ ಸುಬ್ರಹ್ಮಣ್ಯ ದೇವರ ಅವಭೃತೋತ್ಸವ ನಡೆಯಿತು. ದೇವಳದ ಪ್ರಧಾನ ಅರ್ಚಕರು ದೇವರ ಅವಭೃತೋತ್ಸವದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಭಾನುವಾರ ಬೆಳಗ್ಗೆ ದೇವಳದ ದ್ವಾದಶಿ ಮಂಟಪದಲ್ಲಿ ಓಕುಳಿ ಪೂಜೆ ನಡೆಯಿತು. ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವರನ್ನು ಪಲ್ಲಕ್ಕಿಯಲ್ಲಿ ರಥಬೀದಿಗೆ ತಂದು, ನಂತರ ಬಂಡಿ ರಥದಲ್ಲಿ ಕುಮಾರಧಾರಾವರೆಗೆ ಅವಭೃತೋತ್ಸವದ ಸವಾರಿ ಮೆರವಣಿಗೆ ಮೂಲಕ ತರಲಾಯಿತು. ಈ ನಡುವೆ ಇಲ್ಲಿನ ಬಿಲದ್ವಾರದ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು.
ಬಳಿಕ ಕುಮಾರಧಾರ ನದಿಯ ಮತ್ಸ್ಯತೀರ್ಥದಲ್ಲಿ ಪುಷ್ಪಾಲಂಕೃತವಾಗಿ ಸಿಂಗರಿಸಲ್ಪಟ್ಟ ಎರಡು ದೋಣಿಗಳನ್ನು ಜೋಡಿಸಿ ಮಾಡಿದ ಸುಂದರ ತೆಪ್ಪದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ನೌಕಾವಿಹಾರ ನಡೆಯಿತು. ಕುಮಾರಧಾರೆಯ ಜಳಕದಗುಂಡಿಯಲ್ಲಿ ನೂರಾರು ಭಕ್ತರ ಸಾನಿಧ್ಯದಲ್ಲಿ ದೇಗುಲದ ಪುರೋಹಿತರ ಮಂತ್ರ ಘೋಷದೊಂದಿಗೆ ಅವಭೃತೋತ್ಸವ ಜರುಗಿತು.