ಮುಡಾ ಮಾಜಿ ಆಯುಕ್ತರಿಂದಲೇ ಹನಿ ಟ್ರ್ಯಾಪ್ ಶಂಕೆ!
ಮೈಸೂರು : ಸ್ನೇಹಮಯಿ ಕೃಷ್ಣ ಆಡಿಯೋ ಬಾಂಬ್ ಪ್ರಕರಣ ಇದೀಗ ನಾಟಕೀಯ ತಿರುವು ಪಡೆದಿದೆ. ಚಿನ್ನದ ಉದ್ಯಮಿ ವಿನೋದ್ ಮತ್ತು ಮುಡಾ ಮಾಜಿ ಆಯುಕ್ತ ನಟೇಶ್ ಸೇರಿ ಸ್ನೇಹಮಯಿ ಕೃಷ್ಣರನ್ನು ಸಿಲುಕಿಸಲು ಪಕ್ಕಾ ಪ್ಲಾನ್ ರೂಪಿಸಿದ್ದಾರಾ ಎಂಬ ಗಂಭೀರ ಅನುಮಾನಗಳು ಸಿಸಿಬಿ ತನಿಖೆಯಲ್ಲಿ ಮೂಡಿವೆ. ಬೆಂಗಳೂರು ಸಿಸಿಬಿ ಅಧಿಕಾರಿಗಳು ವಿನೋದ್ ಮತ್ತು ನಟೇಶ್ ಜೊತೆಗಿರುವ ಹಲವು ಫೋಟೋಗಳನ್ನು ಪತ್ತೆ ಮಾಡಿದ್ದು, ಇದೀಗ ಸ್ನೇಹಮಯಿ ಕೃಷ್ಣರನ್ನು ಟ್ರ್ಯಾಪ್ ಮಾಡುವ ಯತ್ನ ನಡೆದಿತ್ತೇ ಎಂಬ ಸಂಶಯ ಬಲವಾಗಿದೆ.
ವಿನೋದ್ ಆರಂಭದಲ್ಲಿ ಸ್ನೇಹಮಯಿ ಕೃಷ್ಣರ ವಿಶ್ವಾಸ ಗಳಿಸಿದ್ದರು. ನಟೇಶ್ ಮಾತನಾಡಿದ್ದು ಎನ್ನಲಾದ ಆಡಿಯೋ ಒಂದನ್ನು ಸ್ನೇಹಮಯಿ ಕೃಷ್ಣರಿಗೆ ನೀಡಿದ್ದರು. ಈ ಆಡಿಯೋದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ನಟೇಶ್ ಲಂಚ ನೀಡಿದ ಬಗೆಗೆ ಮಾತನಾಡಲಾಗಿದೆ ಎಂದು ವಿನೋದ್ ತಿಳಿಸಿದ್ದರು. ಲಂಚವಾಗಿ ನೀಡಿದ ಕಾರು ಮತ್ತು ಹಣದ ಚೀಲದ ಬಗ್ಗೆ ಕಥೆ ಹೇಳಿ, ಕಾರಿನ ಫೋಟೋಗಳನ್ನೂ ಸ್ನೇಹಮಯಿ ಕೃಷ್ಣರಿಗೆ ವಿನೋದ್ ಕೊಟ್ಟಿದ್ದರು. ವಿನೋದ್ ಮಾತುಗಳನ್ನು ನಂಬಿದ ಸ್ನೇಹಮಯಿ ಕೃಷ್ಣ, ಸಿಎಸ್ ಶಾಲಿನಿ ರಜನೀಶ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಅಷ್ಟೇ ಅಲ್ಲದೆ, ಮಾಧ್ಯಮಗಳ ಎದುರು ಸಹ ಇದೇ ಆರೋಪಗಳನ್ನು ಪುನರುಚ್ಚರಿಸಿ, ದೂರು ಸಹ ದಾಖಲಿಸಿದ್ದರು.
ಆದರೆ, ಪ್ರಕರಣದ ತನಿಖೆ ಮುಂದುವರಿದಂತೆ, ಸ್ನೇಹಮಯಿ ಕೃಷ್ಣ ಅವರು ಸಿಎಸ್ಗೆ ಕ್ಷಮೆಯಾಚಿಸಿ ತಾವು ನೀಡಿದ ದೂರನ್ನು ವಾಪಸ್ ಪಡೆದರು. ಸಿಎಸ್ ಮೇಲಿನ ಆರೋಪಗಳು ಸುಳ್ಳು ಎಂದು ಹೇಳಿದ್ದರು. ಆದರೂ, ನಟೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಲಂಚದ ವಿಚಾರ ಸತ್ಯ ಎಂದು ಸ್ನೇಹಮಯಿ ಕೃಷ್ಣ ಸಮರ್ಥಿಸಿಕೊಂಡಿದ್ದರು. ಇದೀಗ ಪ್ರಕರಣದಲ್ಲಿ ಹೊಸ ವಿಚಾರ ಬಯಲಾಗಿದ್ದು, ವಿನೋದ್ ಮತ್ತು ನಟೇಶ್ ಇಬ್ಬರು ಪರಸ್ಪರ ಸ್ನೇಹಿತರು ಎಂಬ ಅಂಶ ಬೆಳಕಿಗೆ ಬಂದಿದೆ.
For More Updates Join our WhatsApp Group :




