ಕುಡಿದ ವ್ಯಕ್ತಿಗೆ ಕಾರು ನೀಡಿದ ಶೋರೂಂ ಎಡವಟ್ಟು.
ಬೆಂಗಳೂರು: ಶೋರೂಂ ಸಿಬ್ಬಂದಿಯ ಬೇಜವಾಬ್ದಾರಿಯಿಂದಾಗಿ ಟೆಸ್ಟ್ ಡ್ರೈವ್ ವೇಳೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಬೆಂಗಳೂರಿನ ಮಹದೇವಪುರದಲ್ಲಿ ನಡೆದಿದೆ. ಮದ್ಯಪಾನ ಮಾಡಿ ಬಂದಿದ್ದ ವ್ಯಕ್ತಿಗೆ ಕಾರು ಚಲಾಯಿಸಲು ನೀಡಿದ್ದೇ ಈ ಅನಾಹುತಕ್ಕೆ ಕಾರಣವಾಗಿದ್ದು, ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬೆಂಗಳೂರಿನ ಮಹದೇವಪುರದ ವಿಜ್ಞೇಶ್ವರ ನಗರದಲ್ಲಿ ಘಟನೆ ಸಂಭವಿಸಿದೆ. ಕುಡಿದು ಬಂದು ಟೆಸ್ಟ್ ಡ್ರೈವ್ಗೆ ಕಾರು ಕೊಂಡುಹೋದ ವ್ಯಕ್ತಿ ನಾಲ್ಕು ವಾಹನಗಳಿಗೆ ಗುದ್ದಿಸಿ ಹಾನಿ ಮಾಡಿದ್ದಾನೆ.
ಮದ್ಯಪಾನಿಯ ಟೆಸ್ಟ್ ಡ್ರೈವ್ ಘಟನೆಯ ವಿವರ
ಮಹದೇವಪುರದ ವಿಜ್ಞೇಶ್ವರ ನಗರದಲ್ಲಿರುವ ಕಾರು ಶೋರೂಂಗೆ ಏಪ್ರಿಲ್ 12ರಂದು ಅಭಿಲಾಷ್ ಎಂಬಾತ ಕಾರು ಖರೀದಿಸುವ ಉದ್ದೇಶದಿಂದ ತೆರಳಿದ್ದ. ಆದರೆ, ಆತ ಮದ್ಯ ಸೇವಿಸಿರುವುದು ತಿಳಿದಿದ್ದರೂ ಶೋರೂಂ ಸಿಬ್ಬಂದಿ ಆತನಿಗೆ ಟೆಸ್ಟ್ ಡ್ರೈವ್ ಮಾಡಲು ಕಾರನ್ನು ನೀಡಿದ್ದಾರೆ. ಕಾರು ಹತ್ತಿದ ಅಭಿಲಾಷ್ ಮದ್ಯದ ಅಮಲಿನಲ್ಲಿ ಮನಸೋ ಇಚ್ಛೆ ವಾಹನ ಚಲಾಯಿಸಿದ್ದಾನೆ. ಈ ವೇಳೆ ರಸ್ತೆಯಲ್ಲಿದ್ದ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ.
ಅಭಿಲಾಷ್ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ರಮೇಶ್ ಎಂಬುವವರ ಕಾಲು ಮುರಿದಿದ್ದು, ಅವರು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಬಳಿಕ ಆಕ್ರೋಶಗೊಂಡ ಸ್ಥಳೀಯರು ಆರೋಪಿ ಅಭಿಲಾಷ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಾಯಗೊಂಡಿರುವ ಅಭಿಲಾಷ್ ಕೂಡ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಹದೇವಪುರ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
For More Updates Join our WhatsApp Group :




