ರಾಜ್ಯದಲ್ಲಿ 𝗔𝗜 ಮತ್ತು ಕ್ವಾಂಟಮ್ ತಂತ್ರಜ್ಞಾನಗಳ ಬಳಕೆಗೆ ಪೂರಕ ಪರಿಸರ ನಿರ್ಮಾಣ: ಸಚಿವ ಎನ್ ಎಸ್ ಭೋಸರಾಜು
ಬೆಂಗಳೂರು: ಕ್ವಾಂಟಮ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ನಂತಹ ಆಧುನಿಕ ತಂತ್ರಜ್ಞಾನಗಳ ಬಳಕೆಗೆ ಪೂರಕವಾದ ನೀತಿಗಳನ್ನು ರಾಜ್ಯ ಸರ್ಕಾರ ನಿರ್ಮಿಸಿದ್ದು, ಇದು ತಂತ್ರಜ್ಞಾನ ಕ್ಷೇತ್ರದ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳನ್ನ ಕಲ್ಪಿಸಲಿದೆ *ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.*
ಇಂದು ಏಟ್ರಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ‘ವಿಜ್ಞಾನರಂಗ್-2026’ ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾಷಣದ ಆರಂಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ದಿವಂಗತ ಬಿ. ಎನ್. ಚಿನ್ನಸ್ವಾಮಿ ರಾಜು ಅವರನ್ನು ಸ್ಮರಿಸಿದ ಸಚಿವರು, “ಒಬ್ಬ ಶ್ರೇಷ್ಠ ಶಿಕ್ಷಣತಜ್ಞ, ಸಮಾಜ ಸೇವಕ ಹಾಗೂ ಉದ್ಯಮಿಯಾಗಿ ಅವರು ಹಾಕಿಕೊಟ್ಟ ಭದ್ರ ಬುನಾದಿ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ,” ಎಂದು ಬಣ್ಣಿಸಿದರು.
“ಇಂದಿನ ತಾಂತ್ರಿಕ ಯುಗದಲ್ಲಿ ನಾವೀನ್ಯತೆ ಎನ್ನುವುದು ಕೇವಲ ಒಂದು ಆಯ್ಕೆಯಾಗಿರದೆ, ಸಮಾಜದ ಪ್ರಗತಿ ಹಾಗೂ ಅಭಿವೃದ್ದಿಗೆ ಅತ್ಯಗತ್ಯವಾಗಿದೆ. ಕೈಗಾರಿಕೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಜೊತೆಯಾಗಿ ಬೆಳೆಯುವಂತಹ ಅತ್ಯುತ್ತಮ ಪರಿಸರ ವ್ಯವಸ್ಥೆ ನಮ್ಮ ರಾಜ್ಯದಲ್ಲಿದೆ” ಎಂದರು.
ಯುವ ಪೀಳಿಗೆ ಹುಟ್ಟು ಹಾಕುವ ಹೊಸ ಕಲ್ಪನೆಗಳು ಭವಿಷ್ಯದ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಬಲ್ಲವು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮಾಜದ ಒಳತಿಗಾಗಿ ತಮ್ಮ ಜ್ಞಾನವನ್ನು ಬಳಸಬೇಕು. ನೀರಿನ ನಿರ್ವಹಣೆ, ಸುಸ್ಥಿರ ಅಭಿವೃದ್ಧಿ ಮತ್ತು ಡಿಜಿಟಲ್ ಬದಲಾವಣೆಯಂತಹ ಜ್ವಲಂತ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಯುವ ಸಮುದಾಯ ಪ್ರಮುಖ ಪಾತ್ರ ವಹಿಸಬೇಕು ಎಂದು ಸಚಿವ ಎನ್ ಎಸ್ ಭೋಸರಾಜು ಕರೆ ನೀಡಿದರು.
For More Updates Join our WhatsApp Group :




