ಸಹಕಾರ ಸಮೃದ್ಧಿ ಸೌಧ ಉದ್ಘಾಟನೆ: ಸಹಕಾರ ಕ್ಷೇತ್ರದ ಶಕ್ತಿ ಮತ್ತು ಸವಾಲುಗಳ ಕುರಿತು ಡಿಸಿಎಂ ಮಾತು
ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಸಹಕಾರ ಸಂಘಗಳ ನಿಬಂಧಕರ ನೂತನ ಆಡಳಿತ ಕಚೇರಿ ‘ಸಹಕಾರ ಸಮೃದ್ಧಿ ಸೌಧ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಹಕಾರ ಕ್ಷೇತ್ರದ ಮಹತ್ವವನ್ನು ಹೈಲೈಟ್ ಮಾಡಿದರು. ಅವರು ಮಾತನಾಡುತ್ತಾ, “ಹೊಸ ಹಾಗೂ ಯುವ ನಾಯಕರನ್ನು ಹುಟ್ಟುಹಾಕುವ ಶಕ್ತಿ ಸಹಕಾರ ಕ್ಷೇತ್ರಕ್ಕಿದೆ. ಇದು ಕೇವಲ ಆರ್ಥಿಕವಲ್ಲ, ರಾಜಕೀಯವಾಗಿ ನಾಯಕತ್ವ ರೂಪಿಸುವ ವೇದಿಕೆಯೂ ಆಗಿದೆ” ಎಂದು ಹೇಳಿದರು.
ಸಹಕಾರ ಕ್ಷೇತ್ರದಲ್ಲಿ ಬೆಳೆದು ಶಾಸಕರು ಹಾಗೂ ರಾಷ್ಟ್ರ ಮಟ್ಟದ ನಾಯಕರಾಗಿರುವ ಅನೇಕ ಉದಾಹರಣೆಗಳಿವೆ ಎಂದು ಅವರು ನೆನಪಿಸಿದರು. “ವಿಎಸ್‌ಎಸ್‌ಎನ್‌ಎಲ್, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ ಅನೇಕರು ರಾಜಕೀಯದಲ್ಲಿ ಶಿಖರಕ್ಕೇರಿದ್ದಾರೆ” ಎಂದು ಹೇಳಿದರು. ಸಹಕಾರ ಕ್ಷೇತ್ರವನ್ನು “ಕೂತವನದ್ದೇ ಖುರ್ಚಿ, ಒದ್ದವನದ್ದೇ ಚೆಂಡು” ಎಂದು ವ್ಯಂಗ್ಯವಾಗಿ ವಿವರಿಸಿದ ಅವರು, ಈ ಕ್ಷೇತ್ರದಲ್ಲಿ ಅಧಿಕಾರ ಹಾಗೂ ಪ್ರಭಾವ ಸ್ಥಿರವಾಗಿರುತ್ತದೆ ಎಂದು ಹೇಳಿದರು.

ಸಹಕಾರಿ ಸಂಘಗಳ ಮೂಲಕ ಉದ್ಯೋಗ ಸೃಷ್ಟಿ, ಆರ್ಥಿಕ ಸ್ವಾತಂತ್ರ್ಯ ಹಾಗೂ ರೈತರ ಬೆಳವಣಿಗೆ ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಡಿಸಿಸಿ ಬ್ಯಾಂಕ್‌ಗಳ ಮೂಲಕ ಕೃಷಿ ಹಾಗೂ ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಹೇಳಿದರು. 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತಿರುವ ಯೋಜನೆಗಳನ್ನೂ ಅವರು ಉಲ್ಲೇಖಿಸಿದರು.
ಆದರೆ ಕೆಲ ಸಂಘಗಳಲ್ಲಿ ಅನಿಯಮಿತತೆ ಮತ್ತು ಭ್ರಷ್ಟಾಚಾರವೂ ಇದೆ ಎಂದು ಒಪ್ಪಿಕೊಂಡ ಅವರು, ಕಾರ್ಯದರ್ಶಿಗಳ ಅಸಮರ್ಪಕ ನಿರ್ವಹಣೆ ಹಾಗೂ ಸಾಲ ವಿತರಣೆ ದುರುಪಯೋಗದ ಬಗ್ಗೆ ಎಚ್ಚರಿಕೆ ನೀಡಿದರು. ಇಂತಹ ಪ್ರಕರಣಗಳು ರೈತರ ಆತ್ಮಹತ್ಯೆಗೂ ಕಾರಣವಾಗುತ್ತಿರುವುದು ಗಂಭೀರ ವಿಷಯ ಎಂದು ಹೇಳಿದರು.
ಸಹಕಾರಿ ವ್ಯವಸ್ಥೆ ನಂಬಿಕೆಯ ಮೇಲೆ ನಿಂತಿದ್ದು, ಅದನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು. ಅಧಿಕಾರಿಗಳು ಮತ್ತು ನಿಬಂಧಕರು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
For More Updates Join our WhatsApp Group :




