ಕುಣಿಗಲ್ ಬಳಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ದುರ್ಮರಣ
ತುಮಕೂರು : ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ರಾಜ್ಯ ಹೆದ್ದಾರಿ 33ರಲ್ಲಿ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ದುಃಖದ ವಾತಾವರಣ ಸೃಷ್ಟಿಸಿದೆ. ದೇವರಾಯನದುರ್ಗ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ವಾಪಸ್ ಮಂಡ್ಯಕ್ಕೆ ಮರಳುತ್ತಿದ್ದ ವೇಳೆ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಡಿಕ್ಕಿಯಿಂದ ಈ ದಾರುಣ ಘಟನೆ ನಡೆದಿದೆ.
ಕುಣಿಗಲ್ ತಾಲೂಕಿನ ಟಿ.ಎಂ. ರಸ್ತೆ ಹೊನ್ನೇನಹಳ್ಳಿ–ಚಿಗಣಿಪಾಳ್ಯ ಮಧ್ಯೆ ಈ ಅಪಘಾತ ಸಂಭವಿಸಿದೆ. ಮೃತರನ್ನು ಮಂಡ್ಯ ನಿವಾಸಿಗಳಾದ ಕುಮಾರ್ ನರಸಿಂಹಸ್ವಾಮಿ (65), ಅವರ ಪತ್ನಿ ಕೆ.ಆರ್. ಗಾಯತ್ರಿ (60) ಹಾಗೂ ಕುಟುಂಬದ ಇನ್ನಿಬ್ಬರು ಸದಸ್ಯರು ಎಂದು ಗುರುತಿಸಲಾಗಿದೆ. ಕುಟುಂಬದವರು ವಿಶೇಷ ಪೂಜೆ ಸಲ್ಲಿಸಿ ವಾಪಸ್ ಬರುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದರು.
ಘಟನೆ ಹಿನ್ನೆಲೆಯಲ್ಲಿ ಕೆಲಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಅಪಘಾತಕ್ಕೆ ಲಾರಿ ಚಾಲಕನ ಅಜಾಗರೂಕ ಚಾಲನೆಯೇ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದೇವರ ದರ್ಶನಕ್ಕೆ ತೆರಳಿದ್ದ ಕುಟುಂಬ ದುರಂತ ಅಂತ್ಯ ಕಂಡಿರುವುದು ಗ್ರಾಮ ಹಾಗೂ ಕುಟುಂಬಸ್ಥರಲ್ಲಿ ಆಘಾತ ಮೂಡಿಸಿದೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH



