ಮಹಿಳೆಗೆ ನೆರವಾದ ಗೃಹ ಸಚಿವರು.
ತುಮಕೂರು: ವಸತಿಗಾಗಿ ಆಗ್ರಹಿಸಿ ಸಚಿವರ ಎದುರೇ ದಯಾಮರಣ ಬೇಡಿದ್ದ ಶಿರಾ ತಾಲೂಕಿನ ಮಹಿಳೆ ರಾಬಿಯಾ ಅವರ ಕಣ್ಣೀರಿಗೆ ಕೊನೆಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಂದಿಸಿದ್ದಾರೆ. ಮಹಿಳೆಯ ಮುಂದಿನ ಆರು ತಿಂಗಳ ಬಾಡಿಗೆ ಮತ್ತು ರೇಷನ್ ವೆಚ್ಚವನ್ನು ಭರಿಸುವುದರ ಜೊತೆಗೆ ಮನೆ ಕೊಡಿಸುವ ಭರವಸೆಯನ್ನ ನೀಡಿದ್ದಾರೆ.
ಕಳೆದ ಏಪ್ರಿಲ್ 8ರಂದು ತುಮಕೂರು ನಗರದ ಗ್ರಂಥಾಲಯ ಸಂಕೀರ್ಣದಲ್ಲಿ ನಡೆದಿದ್ದ ಜನಸಂಪರ್ಕ ಸಭೆಯಲ್ಲಿ ರಾಬಿಯಾ ಎಂಬ ಮಹಿಳೆ ವೇದಿಕೆ ಮೇಲೆ ಬಂದು ಆಕ್ರೋಶ ವ್ಯಕ್ತಪಡಿಸಿದ್ದರು. “ಎರಡು ವರ್ಷಗಳ ಹಿಂದೆಯೇ ಭರವಸೆ ನೀಡಿದ್ದರೂ ನನಗೆ ಮನೆ ನೀಡಿಲ್ಲ, ನನಗೆ ಬದುಕಲು ದಾರಿ ಇಲ್ಲದಿದ್ದರೆ ದಯಾಮರಣ ನೀಡಿ” ಎಂದು ಸಚಿವರ ಎದುರೇ ಕಣ್ಣೀರು ಹಾಕಿದ್ದರು.
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಮಸ್ಯೆ ಆಲಿಸಲಿ ಎಂದು ವೇದಿಕೆ ಮೇಲೆಯೇ ಹಾಡು ಹಾಡುವ ಮೂಲಕ ರಾಬಿಯಾ ಎಲ್ಲರ ಗಮನ ಸೆಳೆದಿದ್ದರು.ನಿನ್ನೆ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ನಿಮಿತ್ತ ತುಮಕೂರಿಗೆ ಆಗಮಿಸಿದ್ದ ಸಚಿವರನ್ನು ರಾಬಿಯಾ ಅವರು ಪ್ರವಾಸಿ ಮಂದಿರದಲ್ಲಿ (IB) ಭೇಟಿ ಮಾಡಿದ್ದರು. ಈ ವೇಳೆ ರಾಬಿಯಾಳ ಕಷ್ಟ ಆಲಿಸಿದ ಸಚಿವರು, ಆಕೆಯ ವಾಸದ ಮನೆಯ ಆರು ತಿಂಗಳ ಬಾಡಿಗೆ ಹಾಗೂ ಮನೆಗೆ ಬೇಕಾದ ರೇಷನ್ (ದಿನಸಿ) ವೆಚ್ಚವನ್ನು ತಾವೇ ಭರಿಸುವುದಾಗಿ ತಿಳಿಸಿದ್ದಾರೆ. ಮುಂದಿನ ಆರು ತಿಂಗಳ ಒಳಗಾಗಿ ಶಿರಾದಲ್ಲಿ ರಾಬಿಯಾಗೆ ಒಂದು ನಿವೇಶನ ಅಥವಾ ಮನೆ ಕೊಡಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ.
For More Updates Join our WhatsApp Group :




