ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ಜಯಂತಿಯಲ್ಲಿ ಸಚಿವ ಸಂತೋಷ್ ಲಾಡ್ ಪ್ರತಿಪಾದನೆ .
ಧಾರವಾಡ : ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆ ಮೂಲಕ ದೇಶದ ಸಮಾನತೆ ಮತ್ತು ನ್ಯಾಯ ವ್ಯವಸ್ಥೆಗೆ ಬಲವಾದ ಅಡಿಪಾಯ ಹಾಕಿಕೊಟ್ಟವರು ಎಂದು ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್.ಲಾಡ್ ಅವರು ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಸಂಯುಕ್ತವಾಗಿ ಆಯೋಜಿಸಿದ್ದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಅವರ 135 ನೇ ಜಯಂ ಉದ್ಘಾಟಿಸಿ, ಮಾತನಾಡಿದರು.ಅಂಬೇಡ್ಕರ್ ಅವರು ಎದುರಿಸಿದ ಕಷ್ಟಗಳು ಅಪಾರವಾಗಿದ್ದು, ಸಮಾಜದ ಅನ್ಯಾಯ ಮತ್ತು ಅಸಮಾನತೆ ನಡುವೆಯೇ ಅವರು ಉನ್ನತ ಶಿಕ್ಷಣ ಪಡೆದು, ಹಲವು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತದ ಸಂವಿಧಾನವನ್ನು ರಚಿಸಿದ್ದಾರೆ ಎಂದರು.
ಸಂವಿಧಾನವನ್ನು ರಚಿಸಲು ಸುಮಾರು 2 ವರ್ಷ 11 ತಿಂಗಳು 18 ದಿನಗಳ ಕಾಲ ನಿರಂತರ ಚರ್ಚೆ ನಡೆಸಿ ಈ ಮಹತ್ವದ ಗ್ರಂಥವನ್ನು ರೂಪಿಸಲಾಗಿದೆ. ಭಾರತದಲ್ಲಿ ಹಿಂದಿನಿಂದಲೂ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಇದ್ದ ಸಂದರ್ಭದಲ್ಲಿ, ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಅಂಬೇಡ್ಕರ್ ಅವರು ಹೋರಾಡಿ, ಎಲ್ಲ ವರ್ಗಗಳಿಗೂ ಸಮಾನ ಹಕ್ಕುಗಳನ್ನು ಒದಗಿಸುವ ವ್ಯವಸ್ಥೆಯನ್ನು ನಿರ್ಮಿಸಿದರು. ಸಂವಿಧಾನವು ಕೇವಲ ಒಂದು ವರ್ಗಕ್ಕೆ ಸೀಮಿತವಲ್ಲದೆ, ಎಲ್ಲಾ ನಾಗರಿಕರ ಹಿತಕ್ಕಾಗಿ ರೂಪಿತವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ, ಎಸ್.ಎಸ್.ಎಲ್.ಸಿ, ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತದಿಂದ ಸನ್ಮಾನಿಸಿ, ಗೌರವಿಸಲಾಯಿತು.
For More Updates Join our WhatsApp Group :




